ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಧರ್ಮದ ಬಗ್ಗೆ ಹಬ್ಬದ ಆಚರಣೆಯ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ವಿರಾಜಪೇಟೆಯಲ್ಲಿ ಪ್ರತಿಭಟನೆ ಮಾಡಲಾಯಿತು. ಮದಲೈ ಮುತ್ತು, ಜೋಕಿಂ ರೋಡ್ರಿಗ್ರಸ್, ಜೂಡಿವಾಜ್, ಅಗಸ್ಟಿನ್ ಬೆನ್ನಿ ಇದ್ದರು. 
ಜಿಲ್ಲೆ

ವಿರಾಜಪೇಟೆಯಲ್ಲಿ ಕ್ರೈಸ್ತರಿಂದ ಮೌನ ಪ್ರತಿಭಟನೆ

ಎಂ.ರವಿ

ವಿರಾಜಪೇಟೆ: ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಧರ್ಮ, ಹಬ್ಬದ ಆಚರಣೆಯ ಬಗ್ಗೆ ಅವಹೇಳನ ಮಾಡುವಂತೆ ಪೋಸ್ಟ್ ಹರಿಯಬಿಟ್ಟು ನಿಂದಿಸಿದ್ದಾರೆ ಎಂದು ಆರೋಪಿಸಿ ಭಾನುವಾರ ಕ್ರೈಸ್ತ ಸಮುದಾಯದವರು ವಿರಾಜಪೇಟೆ ಚರ್ಚ್ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು.

ಕೊಡಗಿನ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ವಿರಾಜಪೇಟೆ ತಾಲೂಕು ಘಟಕದ ಪದಾಧಿಕಾರಿಗಳು ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಮುಂಭಾಗದಲ್ಲಿ ಜಮಾಯಿಸಿ, ಧರ್ಮ ಕೇಂದ್ರದ ಸಹಾಯಕ ಧರ್ಮಗುರುಗಳಾದ ರೆ.ಫಾ.ಮದಲೈ ಮುತ್ತು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ಪ್ರಭು ಕ್ರಿಸ್ತರನ್ನು ಮತ್ತು ಹಬ್ಬದ ಆಚರಣೆಯ ಕುರಿತು ನಿಂದಿಸಿ, ಅಶ್ಲೀಲ ಪದ ಬಳಕೆ ಮಾಡಿರುವುದನ್ನು ಖಂಡಿಸಿದರು.

ಅಸೋಸಿಯೇಷನ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಸ್ ಮಾತನಾಡಿ, ಸಾಮಾಜಿಕ ಜಾಲತಾಣದ ಮೂಲಕ ಪ್ರಭು ಕ್ರಿಸ್ತರನ್ನು ಅಶ್ಲೀಲ ಶಬ್ದಗಳ ಬಳಕೆ ಮಾಡಿ ಅವಹೇಳನ ಮಾಡಲಾಗಿದೆ. ಅಲ್ಲದೆ ಹಬ್ಬದ ಆಚರಣೆಯ ಬಗ್ಗೆಯೂ ಧರ್ಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಬಿಂಬಿಸಿದ್ದಾರೆ. ಇದು ಖಂಡನೀಯ. ಬರೆದಿರುವ ಸಂದೇಶವನ್ನು ಖಂಡಿಸಿ ವಿರಾಜಪೇಟೆ ನಗರ ಠಾಣೆ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಠಾಣೆಗಳಲ್ಲಿ ಕಿಡಿಗೇಡಿಗಳನ್ನು ಬಂಧಿಸುವಂತೆ ದೂರು ನೀಡಲಾಗಿದೆ. ಅದರೊಂದಿಗೆ ನಾಲ್ಕು ದಿನಗಳ ಗಡುವು ನೀಡಲಾಗಿದೆ. ಪೊಲೀಸ್ ಇಲಾಖೆಯು ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಫಲವಾದಲ್ಲಿ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಸಮುದಾಯದವರೊಂದಿಗೆ ಸಂಸ್ಥೆಯ ಜೊತೆಗೂಡಿ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರೂ ಆದ ರೆ.ಫಾ.ಮದಲೈ ಮುತ್ತು ಮಾತನಾಡಿ, ಧರ್ಮಕ್ಕೆ ಮತ್ತು ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆ ಧಕ್ಕೆಯಾಗುವ ರೀತಿಯಲ್ಲಿ ಸಂದೇಶ ರವಾನೆ ಮಾಡಿರುವುದು ನಮ್ಮ ಧರ್ಮಕ್ಕೆ ಮತ್ತು ಪೂಜಿಸುವ ದೇವರಿಗೆ ಮಾಡಿರುವ ಅಪಮಾನದಂತೆ. ಇದು ಮತ್ತೊಮ್ಮೆ ಮರುಕಳಿಸಬಾರದು. ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಒತ್ತಾಯಿಸಿದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಜೋಕಿಂ ರೋಡ್ರಿಗ್ರಸ್ ಮಾತನಾಡಿ, ಕ್ರೈಸ್ತಧರ್ಮ ಶಾಂತಿಯನ್ನು ಬಯಸುವ ಧರ್ಮವಾಗಿದೆ. ಧರ್ಮಗಳ ವಿರುದ್ಧ ಕಂದಕ ನಿರ್ಮಾಣ ಮಾಡಿ ಕೋಮುವಾದ ಸೃಷ್ಟಿಯಾಗುವ ರೀತಿಯಲ್ಲಿ ಸಂದೇಶ ರವಾನೆ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು. ಅಲ್ಲದೆ ಈ ಸಂಬಂಧ ಸಂಸ್ಥೆಯು ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಎಕಕಾಲಕ್ಕೆ ಕ್ರೈಸ್ತ ಸಮುದಾಯದವರು ಘಟನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿರುತ್ತಾರೆ. ದೂರು ದಾಖಲದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆಗೆ ಜಿಲ್ಲಾಡಳಿತ ಮುಂದಾಗಬೇಕು. ನೀಡಿರುವ ಗಡುವು ಅವಧಿಯಲ್ಲಿ ವ್ಯಕ್ತಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಸಮುದಾಯದವರೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನೆಯ ಸದಸ್ಯರಾದ ಅಗಸ್ಟಿನ್ ಬೆನ್ನಿ, ಪಾಲನ ಸಮಿತಿಯ ಕಾರ್ಯದರ್ಶಿಗಳಾದ ಚಾರ್ಲ್ಸ್ ಡಿ.ಸೋಜಾ, ಧರ್ಮ ಕೇಂದ್ರದ ಕನ್ಯಾ ಸ್ತ್ರೀಯರು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.