ಜಿಲ್ಲೆ

ಗಾಯದ ಹುಲಿಗಳ ಮೂಕ ರೋದನ

ರಾಜಣ್ಣ

ಗುಂಡ್ಲುಪೇಟೆ: ಬಂಡೀಪುರ ಸಫಾರಿ ಮಾರ್ಗದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಎರಡು ಗಾಯಗೊಂಡ ಹುಲಿಗಳಲ್ಲಿ ಒಂದರ ಹಣೆಯ ಮೇಲೆ ಆಳವಾದ ಗಾಯದಲ್ಲಿ ಹುಳು ಬೀಳುತ್ತಿದ್ದು ಸದಾ ಕಾಲ ನೀರಿನಲ್ಲಿಯೇ ಮಲಗಿ ಕಾಲ ಕಳೆಯುತ್ತಿವೆ.


ಬೇಸಿಗೆ ಸಂದರ್ಭದಲ್ಲಿ ಬಂಡೀಪುರದ ಬಹುತೇಕ ಪ್ರದೇಶಗಳ ಕೆರೆಗಳಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಬಿಸಿಲ ತಾಪ ತಣಿಸಿಕೊಳ್ಳಲು ನೀರಿನಲ್ಲಿ ಅರ್ಧ ಮೈ ಮುಳುಗಿಸಿ ವಿಶ್ರಮಿಸುತ್ತಿರುವ ಹುಲಿಗಳು ಒಂದಲ್ಲಾ ಒಂದು ಕೆರೆಯಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ.


ಕೆಲವು ದಿನಗಳ ಹಿಂದೆ ಬೇರೆ ಹುಲಿಗಳೊಂದಿಗೆ ಟೆರಟರಿಗಾಗಿ ನಡೆದ ಕಾದಾಟದಲ್ಲಿ ಬೋಳುಗುಡ್ಡದ ಸಮೀಪವೇ ಕಾಣಿಸುತ್ತಿರುವ ಬೋಳುಗುಡ್ಡ ಮೇಲ್ ಎಂದು ಕರೆಯಲಾಗುವ ಗಂಡುಹುಲಿ ಮತ್ತು ಮೂರು ಕೆರೆ ಸಮೀಪ ಕಾಣಿಸಿಕೊಳ್ಳುವ ಮೂರುಕೆರೆ ಫೀಮೇಲ್ ಎಂದು ಕರೆಯುವ ಹೆಣ್ಣು ಹುಲಿಗಳಿಗೆ ತೀವ್ರ ಪೆಟ್ಟುಬಿದ್ದಿವೆ.


ಒಂದರ ಹಿಂಗಾಲಿಗೆ ಆಗಿರುವ ಗಾಯದಿಂದ ಕುಂಟುತ್ತಾ ಸಾಗುತ್ತಿದೆ. ಮತ್ತೊಂದರ ಭುಜದ ಬಳಿ ಆಳವಾದ ಗಾಯವಾಗಿವೆ. ಹುಲಿಗಳು ಗಾಯಗಳನ್ನು ನೆಕ್ಕುವ ಮೂಲಕ ಸ್ವಾಭಾವಿಕವಾಗಿಯೇ ವಾಸಿ ಮಾಡಿಕೊಳ್ಳುತ್ತಿವೆ.


ಮೂರುಕೆರೆ ಫೀಮೇಲ್ ತನ್ನ ಮೈಮೇಲೆ ಆಗಿರುವ ಗಾಯಗಳನ್ನು ನಾಲಿಗೆಯಿಂದ ನೆಕ್ಕಿ ನೆಕ್ಕಿ ವಾಸಿ ಮಾಡಿಕೊಳ್ಳುತ್ತಿದ್ದು, ಇದರ ಆರೋಗ್ಯ ಸುಧಾರಿಸುತ್ತಿದೆ. ಆದರೆ ಬೋಳುಗುಡ್ಡ ಮೇಲ್ ಎಂದು ಕರೆಯಲಾಗುವ ಗಂಡುಹುಲಿಯ ಮುಖದ ಮೇಲೆ ಆಗಿರುವ ಗಾಯವನ್ನು ನಾಲಿಗೆಯಿಂದ ನೆಕ್ಕಲು ಸಾಧ್ಯವಾಗದ ಪರಿಣಾಮ ಆಳವಾದ ಗಾಯದಲ್ಲಿ ಹುಳುಗಳು ಬೀಳುತ್ತಿವೆ. ಇದರಿಂದ ಹುಲಿ ಬೇಟೆಯಾಡಲು ಸಾಧ್ಯವಾಗದೆ ದಿನೇದಿನೆ ಕೃಶವಾಗುತ್ತಿದೆ. ಹಿಂದಿನ ಕಾಲಿನಲ್ಲಿ ಆಗಿರುವ ಗಾಯದಿಂದ ಸರಿಯಾಗಿ ನಡೆಯಲು ಸಾಧ್ಯವಾಗದೆ ಕುಂಟುತ್ತಾ ಅಲ್ಲದೆ ಬೇಸಿಗೆಯ ತಾಪದಿಂದ ಪಾರಾಗಲು ದಿನದ ಹೆಚ್ಚಿನ ಸಮಯ ಕೆರೆಯ ನೀರಿನಲ್ಲಿ ಮಲಗಿರುತ್ತದೆ.


ವಿಜಯವಾಣಿ ಕಳಕಳಿ: ಈ ಬಗ್ಗೆ ವಿಜಯವಾಣಿ ಏ.15ರಂದು ‘ಬಂಡೀಪುರದಲ್ಲಿ ಗಾಯಗೊಂಡ ಹುಲಿಗಳು’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿ ಅರಣ್ಯ ಇಲಾಖೆಯ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿದಿನವೂ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಮೇಲೆ ನಿಗಾ ಇಟ್ಟಿದ್ದಾರೆ. ಪಶುವೈದ್ಯರು ಹಾಗೂ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸುತ್ತಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ಬೇಸಿಗೆ ಸಂದರ್ಭದಲ್ಲಿ ಹುಲಿಗಳು ಸಂಗಾತಿಗಳ ಹುಡುಕಾಟದಲ್ಲಿದ್ದು ಸೂಕ್ತ ಸಂಗಾತಿ ಸಿಕ್ಕರೆ ಜತೆಯಾಗಿರುತ್ತವೆ. ಸದ್ಯ ಈ ಎರಡೂ ಹುಲಿಗಳು ಸಾಮಾನ್ಯವಾಗಿ ಜತೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಇತ್ತೀಚೆಗೆ ಟೆರಟರಿಗಾಗಿ ಬೇರೆ ಹುಲಿಗಳೊಂದಿಗೆ ನಡೆದ ಕಾದಾಟದಲ್ಲಿ ಇವುಗಳಿಗೆ ತೀವ್ರ ಪೆಟ್ಟುಬಿದ್ದಿವೆ. ಒಂದರ ಹಿಂಗಾಲಿಗೆ ಆಗಿರುವ ಗಾಯದಿಂದ ಕುಂಟುತ್ತಾ ಸಾಗುತ್ತಿದೆ. ಮತ್ತೊಂದರ ಭುಜದ ಬಳಿ ಆಗಿರುವ ಆಳವಾದ ಗಾಯ ಎದ್ದು ಕಾಣುತ್ತಿರುವ ವಿಡಿಯೋಗಳನ್ನು ಸೆರೆಹಿಡಿದು ಗಾಯಗೊಂಡ ಹುಲಿಗಳನ್ನು ರಕ್ಷಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು.


ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವಾಗಿದ್ದರೂ ಕಳೆದ ಕೆಲವು ದಿನಗಳಿಂದ ಗಾಯಗೊಂಡ ಹುಲಿಗಳು ನೋವಿನಿಂದ ಬಳಲುತ್ತಿದ್ದರೂ ಸೂಕ್ತ ಕ್ರಮಕೈಗೊಂಡಿಲ್ಲ. ನೋವು ತಾಳಲಾರದ ಬೋಳುಗುಡ್ಡ ಮೇಲ್ ಯಾವಾಗಲೂ ಕೆರೆಯ ನೀರಿನಲ್ಲಿ ಮಲಗಿರುತ್ತಿದ್ದು ಬೇಟೆಯಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ಅರಣ್ಯ ಇಲಾಖೆ ಇವುಗಳನ್ನು ನಿರ್ಲಕ್ಷ್ಯ ಮಾಡಿದರೆ ಅವು ಸಾವಿಗೀಡಾಗುವ ಸಾಧ್ಯತೆಯಿದೆ.
ವಿದ್ಯಾಶಂಕರ್, ಪರಿಸರ ಪ್ರೇಮಿ

ಎರಡೂ ಹುಲಿಗಳನ್ನು ಅರಣ್ಯ ಇಲಾಖೆಯ ಪಶುವೈದ್ಯರು ಹತ್ತಿರದಿಂದ ಪರಿಶೀಲಿಸುತ್ತಿದ್ದು ಗಾಯಗಳು ವಾಸಿಯಾಗುತ್ತಿವೆ ಎಂದು ತಿಳಿಸಿದ್ದಾರೆ. ಪ್ರತಿ ದಿನವೂ ಗಸ್ತು ಸಿಬ್ಬಂದಿ ಅವುಗಳ ಮೇಲೆ ನಿಗಾ ಇಟ್ಟಿದ್ದಾರೆ. ಗಾಯಗಳು ವಾಸಿಯಾಗದಿದ್ದರೆ ಮಾತ್ರ ಚಿಕಿತ್ಸೆ ನೀಡಬೇಕಾದ ಅಗತ್ಯ ಬೀಳಲಿದೆ.
ದೀಪಾ, ಆರ್‌ಎಫ್‌ಒ, ಬಂಡೀಪುರ ವಲಯ