ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ಬಸವೇಶ್ವರ ಜಾತ್ರೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜಂಗೀ ನಿಕಾಲಿ ಕುಸ್ತಿ (ಜಟ್ಟಿ ಕಾಳಗ) ಜನಮನ ಸೆಳೆಯಿತು. ಕುಸ್ತಿ ಪಂದ್ಯಾವಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಪಂ ಮಾಜಿ ಸದಸ್ಯ ಪವನ ಕತ್ತಿ, ಶರಶ್ಚಂದ್ರ ಕವಟಗಿಮಠ ಚಾಲನೆ ನೀಡಿದರು.
ಕೊಲ್ಲಾಪುರದ ಸಿಕಂದರ್ ಶೇಖ್ ಮತ್ತು ಉತ್ತರಪ್ರದೇಶದ ಮಧುರಾದ ಪಾಲೆಂದರ ನಡುವೆ ನಡೆದ ತೀವ್ರ ಹಣಾಹಣಿ ಪ್ರಥಮ ಕುಸ್ತಿಯಲ್ಲಿ ಕೊಲ್ಲಾಪುರದ ಸಿಕಂದರ್ ಶೇಖ್ ಗೆಲ್ಲುವ ಮೂಲಕ 3.50 ಲಕ್ಷ ರೂ. ಬಹುಮಾನ ಮತ್ತು ಡಾಲ್ ಪಡೆದು ವಿಜಯಶಾಲಿಯಾದರು. ದೆಹಲಿಯ ಆಸಿಸ್ ಹುಡ್ಡಾ ಮತ್ತು ಹರಿಯಾಣದ ಜೋಗಿಂಧರ ನಡುವೆ ನಡೆದ ಎರಡನೆಯ ತುರುಸಿನ ಕುಸ್ತಿ ಸ್ಪರ್ಧೆ ಅರ್ಧ ಗಂಟೆ ನಡೆದರೂ ನಿಖಾಲಿಯಾಗದಿರುವುದರಿಂದ ನಿರ್ಣಾಯಕರು ಸಮಬಲ ಕುಸ್ತಿ ಎಂದು ಘೋಷಿಸಿದರು.
ಹರಿಯಾಣದ ಜಿತು ಪೂಜೇರ ಮತ್ತು ಪುಣೆಯ ಮಾಚುಲಿ ಕೊಕಾಟೆ ನಡುವೆ ನಡೆದ ಮೂರನೆಯ ಕುಸ್ತಿಯಲ್ಲಿ ಮಾಚುಲಿ ಕೊಕಾಟೆ ವಿಜಯಶಾಲಿಯಾದರು.
ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ಅಂತಾರಾಷ್ಟ್ರೀಯ ಕುಸ್ತಿಪಟು ರತನಕುಮಾರ ಮಠಪತಿ, ಶ್ರೀಮಂತ ಗೌರವಜಿ ಸರಕಾರ, ಈಶ್ವರ ಫರಾಳೆ, ರಾಮಗೌಡ ಪಾಟೀಲ, ಅಶೋಕ ಹರಗಾಪೂರೆ, ನಿಶಿಕಾಂತ ಫರಾಳೆ, ಮಹಾದೇವ ಉದಗಟ್ಟಿ, ಭೀಮಾ ಉದಗಟ್ಟಿ, ಬಸವರಾಜ ಕಡೋಲೆ, ಮಹೇಶ ಫರಾಳೆ, ಗೋಪಾಲ ಕುದುರೆ, ಬೆಳಗಾವಿಯ ಮಹಾವೀರ ಜಕನೂರ ಇತರರಿದ್ದರು.