ಕುಂದಗೋಳ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಪಟ್ಟಣದ ಹೆಸ್ಕಾಂ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಮಾತನಾಡಿ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್, ದಿನಸಿ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ಇಂಥದ್ದರಲ್ಲಿ ವಿದ್ಯುತ್ ದರ ಏರಿಕೆ, ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗೆ ಪೂರೈಸುವ ವಿದ್ಯುತ್ನಲ್ಲಿ ಕಡಿತ ಮಾಡಿರುವುದು ಖಂಡನೀಯ. ಅಲ್ಲದೆ, ವಿದ್ಯುತ್ ಬಿಲ್ನಲ್ಲಿ ಸಾಕಷ್ಟು ಹೆಚ್ಚು-ಕಡಿಮೆ ಮಾಡಲಾಗುತ್ತಿದೆ. ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ವಿದ್ಯುತ್ ಕಡಿತಗೊಳಿಸಿದ ಮನೆಗಳಿಗೆ ಪುನಃ ಸಂಪರ್ಕ ಕಲ್ಪಿಸಬೇಕು. ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗಳಿಗೆ ಕಡಿತಗೊಳಿಸಿದ ವಿದ್ಯುತ್ ಅನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಅರವಿಂದ ಕಟಗಿ ಮಾತನಾಡಿ, ರೈತರು, ಸಾಮಾನ್ಯ ಜನರು ವಿದ್ಯುತ್ ಬಿಲ್ ತುಂಬದಿದ್ದರೆ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಅಧಿಕಾರಿಗಳು ಮುಂದಾಗುತ್ತಾರೆ. ಇದರಿಂದ ಬಡವರು ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ. ಆದರೆ, ದೊಡ್ಡ ದೊಡ್ಡ ಕಾರ್ಖಾನೆಗಳು, ರಾಜಕಾರಣಿಗಳು ವಿದ್ಯುತ್ ಬಿಲ್ ತುಂಬದಿದ್ದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕಚೇರಿ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದ ಪ್ರತಿಭಟನಾಕಾರರು, ಕಚೇರಿಗೆ ಕೆಲವು ಗಂಟೆ ಬೀಗ ಹಾಕಿ ಪ್ರತಿಭಟಿಸಿದರು. ನಂತರ ಹೆಸ್ಕಾಂ ಕುಂದಗೋಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಟಿ. ಲಮಾಣಿ ಅವರಿಗೆ ಮನವಿ ನೀಡಿದರು.
ಗಂಗಾಧರ ಪಾಣಿಗಟ್ಟಿ, ಜಿ.ಡಿ. ಘೊರ್ಪಡೆ, ರಾಘವೇಂದ್ರ ನರ್ತಿ, ಪ್ರಕಾಶ ಹರಕುಣಿ, ಸಲೀಂ ಕ್ಯಾಲಕೊಂಡ, ಮಾಬುಸಾಬ್ ಮತ್ತೆಖಾನವರ, ಸುರೇಶ ಸವಣೂರು, ಬಸವರಾಜ ಶಿರಸಂಗಿ, ಬಾಬಾಜಾನ್ ಮಗಲಾನಿ, ಮುದ್ದಣ್ಣ ಕೋಳಿವಾಡ, ರೇಣುಕಾ ಸಂಭಾಜಿ ಇತರರರಿದ್ದರು.