ತುಮಕೂರು: ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ದೇಶದ ವಿವಿಧ ಭಾಗದ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಹಾಗೂ ರೈತರ ಮೇಲೆ ಕೇಂದ್ರ ಸರ್ಕಾರದ ಹಲ್ಲೆ ಹಾಗೂ ದೌರ್ಜನ್ಯ ಖಂಡಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಸಂಘಟನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.
ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಸ್ಪಷ್ಟಪಡಿಸಿದರು.
ಎಪಿಎಂಸಿ, ಕಾರ್ಮಿಕ, ಕರ್ನಾಟಕ ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರು, ಕಾರ್ಮಿಕರು, ಬಡವರನ್ನು ಕಾರ್ಪೋರೇಟ್ ಕಂಪನಿಗಳ ಜೀತದಾಳುಗಳನ್ನಾಗಿ ಕೇಂದ್ರ ಸರ್ಕಾರ ಮಾಡಲು ಹೊರಟಿದೆ. ಇದರ ವಿರುದ್ದ ನಿರಂತರ ಹೋರಾಟ ನಡೆಯುತ್ತಿದ್ದು ಡಿ.7ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಭುತ್ವದ ನಡವಳಿಕೆ ವಿರೋಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ ನಂತರದಲ್ಲಿ ದೇಶದ ಅನ್ನದಾತರನ್ನು ಅತ್ಯಂತ ನಿರ್ಧಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ರೈತರನ್ನು ನಾಶ ಮಾಡಿದರೆ ಅನ್ನವಿಲ್ಲ, ಕಾರ್ಮಿಕರನ್ನು ನಾಶ ಮಾಡಿದರೆ ಸಂಪತ್ತು ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಪ್ರಗತಿಪರ ಚಿಂತಕ ಕೆ.ದೊರೈರಾಜು ಕರೆ ನೀಡಿದರು.
ದೆಹಲಿಯಲ್ಲಿ ಪ್ರತಿಭಟನಾನಿರತ ರೈತರನ್ನು ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಪ್ರತಿಭಟನಾ ಹಕ್ಕಗಳನ್ನು ಪೊಲೀಸರು, ಅರೆ ಸೇನಾ ಪಡೆಗಳ ಮೂಲಕ ದಮನ ಮಾಡುತ್ತಿದೆ. ನಾವು ಇರುವಲ್ಲಿಯೇ ಹೋರಾಟ ನಡೆಸುವ ಮೂಲಕ ಅನ್ನದಾತರಿಗೆ ಬೆಂಬಲ ಸೂಚಿಸಬೇಕಾಗಿದೆ ಎಂದು ವೈದ್ಯ ಡಾ.ಬಸವರಾಜು ಹೇಳಿದರು.
ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಗಿರೀಶ್, ಬಿ.ಉಮೇಶ್, ಅಜ್ಜಪ್ಪ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ಸಿ.ಯತಿರಾಜು, ಉಮಾಪತಿ,ಆನಂದಮೂರ್ತಿ ಮತ್ತಿತರರು ಮಾತನಾಡಿದರು. ರೈತ ಮುಖಂಡರಾದ ಕೆಂಕೆರೆ ಸತೀಶ್, ರವೀಶ್, ವಿಶ್ವಾರಾಧ್ಯ, ಎನ್.ಕೆ.ಸುಬ್ರಹ್ಮಣ್ಯ, ಡಾ.ಅರುಂಧತಿ, ನೂರಾರು ಜನರು ಪಾಲ್ಗೊಂಡಿದ್ದರು.
ದೆಹಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ರೈತರೊಂದಿಗೆ ಷರತ್ತು ರಹಿತ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಸ್ವಯಂಪ್ರೇರಿತ ದೂರು ದಾಖಲಿಸಲಿ: ರೈತರು, ಕಾರ್ಮಿಕರ ಹಲ್ಲೆ, ಲಾಠಿಚಾರ್ಜ್, ದಾರಿಗೆ ಅಡ್ಡಲಾಗಿ ಹಳ್ಳ ತೋಡುವುದು, ಮರಳು ಸುರಿಯುವುದು, ಜಲಫಿರಂಗ ಬಳಕೆಯಂತಹ ಅಮಾನುಷ್ಯ ಕೃತ್ಯಗಳು ನಡೆಯುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಈ ವಿರುದ್ಧ ಮಾನವ ಹಕ್ಕುಗಳ ಆಯೋಗ ಮತ್ತು ಸುಪ್ರಿಂಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ಆನಂದಪಟೇಲ್ ಮನವಿ ಮಾಡಿದರು.
ದೆಹಲಿಗೆ ತೆರಳುತ್ತಿರುವ ರೈತರನ್ನು ದೌರ್ಜನ್ಯದಿಂದ ಕೇಂದ್ರ ಸರ್ಕಾರ ತಡೆದಿದೆ, ಕಾಯ್ದೆಗಳ ಸತ್ಯವನ್ನು ಮರೆಮಾಚುತ್ತಿದೆ. ಸರ್ಕಾರ ನಡೆಸುತ್ತಿರುವ ಅಪಪ್ರಚಾರ ನಡುವೆಯೂ ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟದ ಸ್ವರೂಪವೇ ಬದಲಾಗಲಿದ್ದು ದೇಶದಲ್ಲಿ ದೊಡ್ಡ ಚಳವಳಿ ಆರಂಭವಾಗಲಿದೆ. ಕೆಂಕೆರೆ ಸತೀಶ್ ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ