ಗುಳೇದಗುಡ್ಡ ಪುರಸಭೆಯವರು ಶ್ರೀರಾಮನ ್ಲೆಕ್ಸ್, ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಿದ ಕ್ರಮ ಖಂಡಿಸಿ ಹಿಂದು ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಗುಳೇದಗುಡ್ಡ ಪುರಸಭೆಗೆ ಮುತ್ತಿಗೆ

ಗುಳೇದಗುಡ್ಡ: ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ನಗರದಲ್ಲಿ ವಿವಿಧ ಸಂಘಟನೆಗಳು ಅಳವಡಿಸಿದ್ದ ಶ್ರೀರಾಮನ ಫ್ಲೆಕ್ಸ್, ಬೋರ್ಡ್ ಹಾಗೂ ಕೇಸರಿ ಧ್ವಜ, ಪರಪರಿಗಳನ್ನು ಮಂಗಳವಾರ ಬೆಳಗ್ಗೆ ಸ್ಥಳೀಯ ಪುರಭೆಯವರು ತೆರವುಗೊಳಿಸಿದ ಕ್ರಮ ಖಂಡಿಸಿ ನೂರಾರು ಹಿಂದು ಕಾರ್ಯಕರ್ತರು ಮಂಗಳವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಶ್ರೀರಾಮನ ಪ್ಲೆಕ್ಸ್‌ಗಳನ್ನು ಕಿತ್ತುಹಾಕಿ ಕಸದಪುಟ್ಟಿಗೆ ಹಾಕಿ ಹಿಂದು ಮಹಾಪುರುಷರಿಗೆ ಅವಮಾನಿಸಿ, ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದೀರಿ, ಮೊದಲಿನಂತೆ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಕಟ್ಟಬೇಕು, ಪುರಸಭೆ ಮುಖ್ಯಾಧಿಕಾರಿಗಳು ಈ ಕುರಿತು ಕೂಡಲೇ ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿದರು. ಅಂದಾಜು ಒಂದು ಗಂಟೆ ಹಿಂದು ಕಾರ್ಯಕರ್ತರು ಮುಖ್ಯಾಧಿಕಾರಿ ಜತೆ ವಾಗ್ವಾದ ನಡೆಸಿದರು.

ಬಳಿಕ ಪುರಸಭೆ ಮುಖ್ಯಾಧಿಕಾರಿ ಅಸ್ಲಂ ಮುಜಾವರ ಮಾತನಾಡಿ, ನಾನು ಕಾನೂನಿನಂತೆ ಕ್ರಮ ಕೈಗೊಂಡಿದ್ದೇನೆ. ನಾನು ಯಾರ ವಿರುದ್ಧವೂ ಅಲ್ಲ, ಹಾಗೊಂದು ವೇಳೆ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಮಹಾಪುರಷರ ಪ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಮರಳಿ ತೆಗೆದುಕೊಂಡು ಕಟ್ಟಿ, ಅದರ ಖರ್ಚನ್ನು ನಾನು ಕೊಡುತ್ತೇನೆ ಎಂದಾಗ ಹಿಂದು ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು. ನಂತರ ಪ್ರತಿಭಟನೆ ಸ್ಥಳದಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದ ಶ್ರೀರಾಮನ ಭಾವಚಿತ್ರಕ್ಕೆ ಅಧಿಕಾರಿ ಮುಜಾವರ ಪುಷ್ಪ ಅರ್ಪಿಸಿ ನಮಸ್ಕರಿಸಿದರು.

ವಸಂತಸಾ ಧೋಂಗಡೆ, ಸಂಜಯ ಕಾರಕೂನ, ಭುವನೇಶ ಪೂಜಾರಿ, ಕಮಲಕಿಶೋರ ಮಾಲಪಾಣಿ, ಬಸವರಾಜ ಕುಂಬಾರ, ಸಂಗಣ್ಣ ಹುನಗುಂದ, ಮಹೇಶ ಸೂಳಿಭಾವಿ, ಪೋಲಿಸಪ್ಪ ರಾಮದುರ್ಗ, ಪ್ರಶಾಂತ ಜವಳಿ, ಶಿವಾನಂದ ಬಾದವಾಡಗಿ, ರಾಜು ಗೌಡರ, ರಾಜು ಪತ್ತಾರ, ವಿಠ್ಠಲ ಪತ್ತಾರ, ಸಿಂಧೂರ ತೋಳಮಟ್ಟಿ, ಮುತ್ತು ಚಿಕ್ಕನರಗುಂದ, ಪ್ರಭು ಕಳ್ಳಿಗುಡ್ಡ, ಸುನೀಲ ಪವಾರ, ಶಿವರಾಜ ಮಲಜಿ, ಧರ್ಮಾ ಧಲಬಂಜನ, ಸಂಗಪ್ಪ ಚಟ್ಟೇರ, ರಾಮಣ್ಣ ಚಂದರಗಿ, ಸಂತೋಷ ಬನ್ನಿಕೊಪ್ಪ ಸೇರಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.