ಪ್ರತಿಭಟನಾಕಾರರು ಬಂಧಿಸಿ ಕರೆದೊಯ್ದ ಪೊಲೀಸರು.  
ಜಿಲ್ಲೆ

ಸಿದ್ದು-ಜಮೀರ್ ಜುಗಲ್‌ಬಂಧಿ: ಅರುಣ್ ಲೇವಡಿ

ಶಿವಮೊಗ್ಗ: ವಕ್ಫ್ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಜುಗಲ್‌ಬಂಧಿ ನಡೆಯುತ್ತಿದೆ. ಈಗ ರೈತರ ಜಮೀನನ್ನು ತಮ್ಮದು ಎನ್ನುತ್ತಿದ್ದಾರೆ. ಈಗಾಗಲೇ ಶಾಸಕರ ಮನೆಗೆ, ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಮುಂದೊಂದು ದಿನ ವಿಧಾನಸೌಧಕ್ಕೆ ನುಗ್ಗಿ ಸಿದ್ದರಾಮಯ್ಯ ಅವರಿಗೂ ಕಲ್ಲು ಹೊಡೆಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ವಕ್ಫ್ ವಿರುದ್ಧ ಜಿಲ್ಲಾ ಬಿಜೆಪಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಹುಮತ ಬಂದಿದೆ ಎಂದು ಅಹಂಕಾರ ಪಡಬೇಡಿ. ಹಿಂದು, ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ಕಾಂಗ್ರೆಸ್‌ನ ತುಷ್ಟೀಕರಣಕ್ಕೆ ದೊಡ್ಡ ಇತಿಹಾಸವೇ ಇದೆ. ಹಿಂದುಗಳ ಸಹನೆಯನ್ನು ಪರೀಕ್ಷಿಸುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುತ್ತಿಗೆಗೆ ಯತ್ನಿಸಿದವರ ಬಂಧನ: ಪ್ರತಿಭಟನಾ ಸಭೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದರು. ಒಂದು ಹಂತದ ಬ್ಯಾರಿಕೇಡ್ ಹಾಗೂ ಪೊಲೀಸ್ ರಕ್ಷಣಾ ವ್ಯವಸ್ಥೆಯನ್ನು ದಾಟಿ ಡಿಸಿ ಕಚೇರಿ ಮುಖ್ಯಧ್ವಾರಕ್ಕೆ ತೆರಳಿದರು. ಆದರೆ ಅಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮುರಿಯಲು ಆಗಲಿಲ್ಲ. ಪ್ರತಿಭಟನೆಯಲ್ಲಿದ್ದ ಪುರುಷರನ್ನು ಬಂಧಿಸಿ ಸಿಟಿ ಬಸ್‌ನಲ್ಲಿ ಡಿಎಆರ್‌ಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು. ಆದರೆ ಮಹಿಳಾ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರನ್ನು ಬಂಧಿಸಿ ಕರೆದೊಯ್ಯಲು ಅಗತ್ಯವಿರುವ ಮಹಿಳಾ ಪೊಲೀಸ್ ಸಿಬ್ಬಂದಿಗಳಿರಲಿಲ್ಲ. ಹೀಗಾಗಿ ಮಹಿಳೆಯರು ಕೆಲ ಸಮಯ ಡಿಸಿ ಕಚೇರಿ ಎದುರು ಪ್ರತಿಭಟನೆ ಮುಂದುವರಿಸಿದರು.