ಜಿಲ್ಲೆ

ಅಕ್ಕಿ ವಿಚಾರದಲ್ಲಿ ಸಿದ್ದು ಕ್ಷುಲ್ಲಕ ರಾಜಕಾರಣ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುವುದಲ್ಲದೇ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಅಕ್ಕಿ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ನಾವು ಕಳೆದ ಬಾರಿ ಹೊಸ ಅಕ್ಕಿ ಸ್ಟಾಕ್‌ಗೆ ಬಹಳ ಹತ್ತಿರ ಇದ್ದೆವು. ಇಡೀ ದೇಶದಲ್ಲಿ ಅಕ್ಕಿ ಸಂಗ್ರಹ ಕಡಿಮೆಯಾಗುತ್ತದೆ ಎಂಬ ಆತಂಕವಿತ್ತು. ನಮ್ಮ ದೇಶವಷ್ಟೇ ಅಲ್ಲ, ಪ್ರಪಂಚದಾದ್ಯಂತ ಇತ್ತು. ಹೀಗಾಗಿ 2023 ಜೂ.13ಕ್ಕೆ ಓಪನ್ ಮಾರ್ಕೆಟ್ ಸಪೋರ್ಟ್ ಸಿಸ್ಟಮ್‌ನಲ್ಲಿ (ಒಎಂಎಸ್‌ಎಸ್) ನಾವು ನಿಲ್ಲಿಸಿದ್ದೆವು ಎಂದರು.
ಕೇಂದ್ರ ಸರ್ಕಾರ ಕೊಟ್ಟರೆ 10ಕೆಜಿ ಅಕ್ಕಿ ಕೊಡುತ್ತೇವೆ ಎಂದು ಎಲ್ಲಿಯೂ ಸಿದ್ದರಾಮಯ್ಯ ಹೇಳಿರಲಿಲ್ಲ. ಇದೀಗ ಕೇಂದ್ರದ ಬಳಿ 330 ಲಕ್ಷ ಟನ್ ಅಕ್ಕಿ ಸಂಗ್ರಹ ಆಗಿರುವುದರಿಂದ ನಾವು ಈಗ ಓಪನ್ ಮಾರ್ಕೆಟ್ ಸಪೋರ್ಟ್ ಸಿಸ್ಟಮ್‌ನಲ್ಲಿ ರಾಜ್ಯ ಸರ್ಕಾರಗಳು ಹಾಗೂ ಖಾಸಗಿಯವರಿಗೂ ಅಕ್ಕಿ ನೀಡಲು ಅವಕಾಶವಿದೆ. ಈ ಹಿಂದೆ ಒಂದು ಕೆಜಿ ಅಕ್ಕಿಗೆ 34 ರೂ. ಇತ್ತು. ಈಗ 28 ರೂ.ಗೆ ಇಳಿಸಿದ್ದೇವೆ. ಇದು ನರೇಂದ್ರ ಮೋದಿ ಅವರು ಮಾಡಿರುವ ಉತ್ತಮ ನಿರ್ಧಾರ ಎಂದರು.
ನೀವು ಎಷ್ಟು ಜನರಿಗೆ ಅಕ್ಕಿಯ ಹಣ 170 ರೂ. ನೀಡಿದ್ದೀರಿ?, ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮೀ ಯೋಜನೆ ಹಣ ಹಾಗೂ ವೃದ್ಧಾಪ್ಯ ವೇತನ ಜಮೆ ಆಗಿಲ್ಲ ಏಕೆ?, ಇಂಧನ, ಹಾಲಿನ ದರ ಏಕೆ ಏರಿಕೆ ಮಾಡಿದ್ದೀರಿ? ಎಂಬುದು ಬಹಿರಂಗ ಪಡಿಸಬೇಕು. ಅಂದು ನಾವು ಒಂದು ರೂ. ಏರಿಕೆ ಮಾಡಿದಾಗ ಬೊಬ್ಬೆ ಹೊಡೆದಿರಿ. ಇಂದು ಮೂರೂವರೆ ರೂ. ಇಂಧನ ದರ ಏರಿಕೆ ಮಾಡಿದ್ದೀರಿ. ನಾಚಿಕೆಯಾಗಬೇಕು ನಿಮಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹಾಲು ಒಕ್ಕೂಟಗಳಲ್ಲಿ ರೈತರಿಗೆ ನೀಡುತ್ತಿರುವ ಸಬ್ಸಿಡಿ ಬಂದ್ ಮಾಡಿ ಜನರಿಗೆ ದ್ರೋಹ ಮಾಡಿದ್ದಾರೆ. ಮದ್ಯದ ದರದಿಂದ ಹಿಡಿದು ಎಲ್ಲ ದರ ಏರಿಕೆ ಮಾಡಿ ಜನರಿಗೆ ಹೊರೆ ಹಾಕಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿಲ್ಲ. ಅನೇಕ ಕಾಂಗ್ರೆಸ್ ಶಾಸಕರು ನನ್ನ ಬಳಿ ಬಂದು ಕೇಂದ್ರ ಸರ್ಕಾರದಿಂದ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ದರಿದ್ದೇವೆ. ಆದರೆ, ಈಗ ಅವರು ಅಕ್ಕಿ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರ ಬಳಿ ಅಕ್ಕಿ ಖರೀದಿಗೆ ಹಣವಿಲ್ಲ ಎಂದು ದೂರಿದರು.
ಬೇರೆ ಬೇರೆ ಕಾರಣಗಳಿಂದ ಅಯೋಧ್ಯೆಯಲ್ಲಿ ನಾವು ಸೋತಿದ್ದೇವೆ. ಕಾಂಗ್ರೆಸ್ ಪಕ್ಷ ಪರಜೀವಿ ಪಕ್ಷ. ಎಲ್ಲೆಲ್ಲಿ ಅವರು ನೇರವಾಗಿ ಸ್ಪರ್ಧೆ ಮಾಡಿದ್ದಾರೆ, ಅಲ್ಲಿ ಅವರ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಗುಜರಾತ್‌ನಲ್ಲಿ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಿದೆ?, ಉತ್ತರ ಪ್ರದೇಶದಲ್ಲಿ ಚುಕುಬುಕು ರೈಲು ಆಟ ಆಡುವಾಗ ಮಕ್ಕಳು ಅಂಗಿ ಹಿಡಿದುಕೊಳ್ಳುವ ಹಾಗೆ ಅಖಿಲೇಶ ಯಾದವ್ ಅವರ ಅಂಗಿ ಹಿಡಿದುಕೊಂಡು ಹೋಗಿ ಎಂಟು ಸ್ಥಾನ ಗೆದ್ದ ಮೇಲೆ ಅಯೋಧ್ಯೆಯಲ್ಲಿ ನಾವು ಗೆದ್ದೆವು ಎಂದು ಹೇಳುವುದು ಸರಿಯಲ್ಲ. ಇಡೀ ಇಂಡಿ ಘಟಬಂಧನ್ ಸೇರಿ ಕಾಂಗ್ರೆಸ್ 230 ಸ್ಥಾನ ಪಡೆದುಕೊಂಡರೆ, ಬಿಜೆಪಿ 240 ಸ್ಥಾನ ಪಡೆದಿದೆ. ಮುಂದೆ ಉತ್ತರಪ್ರದೇಶದಲ್ಲಿ ಸರ್ಕಾರ ನಮ್ಮದೇ ಬರುತ್ತದೆ. ಅದೇ ರೀತಿ ಗುಜರಾತ್‌ನಲ್ಲಿ ನಮ್ಮದೇ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ದೂರಗನಸು ಕಾಣುವ ಮತ್ತು ದುರಂಹಕಾರ ಬಿಡಲಿ ಎಂದು ಚಾಟಿ ಬೀಸಿದರು.