ರಾಯಚೂರಿನ ಗಂಜ್ ಕಲ್ಯಾಣಮಂಟಪದಲ್ಲಿ ಭಾನುವಾರ ಜರುಗಿದ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕರಾದ ರಾಜುಗೌಡ, ಪಿ.ರಾಜೀವ್, ಎ.ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಇದ್ದರು. 
ಜಿಲ್ಲೆ

ಸಿದ್ದು ಅಹಿಂದ ಬಿಟ್ಟು ಅಲ್ಪ ಸಂಖ್ಯಾತರ ಹಿಂದೆ ಬಿದ್ದಿದ್ದಾರೆ

ರಾಚಯ್ಯ ಸ್ವಾಮಿ

ರಾಯಚೂರು: ಅಹಿಂದ ನಾಯಕ ಎನಿಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಬಿಟ್ಟು ಬಹಳ ದಿನಗಳಾಗಿದ್ದು, ಹಿಂದುಳಿದ ವರ್ಗಗಳ ಜನರನ್ನು ಬಿಟ್ಟು ಈಗ ಅಲ್ಪ ಸಂಖ್ಯಾತರ ಹಿಂದೆ ಹೋಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಸ್ಥಳೀಯ ಗಂಜ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಲ್ಪ ಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದು, ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡರೆ ಅಲ್ಪ ಸಂಖ್ಯಾತರು ಅಸಮಾಧಾನಗೊಳ್ಳುತ್ತಾರೆ ಎಂದು ಹೋಗಿಲ್ಲ ಎಂದರು.
ಗ್ಯಾರಂಟಿಗಳಿಂದಾಗಿ ಕರ್ನಾಟಕದಲ್ಲಿ ಗೆಲುವು ಸಾಸಿದ್ದ ಕಾಂಗ್ರೆಸ್‌ಗೆ ಪಂಚರಾಜ್ಯ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿತ್ತು. ಆದರೆ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಗ್ಯಾರಂಟಿಗಳಿಗಿಂತ ಪ್ರಧಾನಿ ಮೋದಿ ಗ್ಯಾರಂಟಿಗಳು ಶ್ರೇಷ್ಠ ಎಂದು ತೋರಿಸಿಕೊಟ್ಟಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಸಹಜವಾಗಿ ಉತ್ಸಾಹ ಕಡಿಮೆಯಾಗಿತ್ತು. ಆದರೆ ಬೆಂಗಳೂರಿನಲ್ಲಿ ಜರುಗಿದ ಕಾರ್ಯಕಾರಣಿಯಲ್ಲಿ ಭಾಗವಹಿಸಿದ್ದ ಮುಖಂಡರಲ್ಲಿ ರಣೋತ್ಸವ ಕಂಡು ಬರುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರದಲ್ಲಿ ಪಕ್ಷ ಗೆಲುವು ಸಾಸುವುದು ನಿಶ್ಚಿತ.
ರಾಜ್ಯ ಸರ್ಕಾರ ಹಿಂದು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಗ್ರಾ.ಪಂ. ಸದಸ್ಯರು ಸಭೆಯಲ್ಲಿ ನಿರ್ಣಯ ಮಾಡಿ ಧ್ವಜ ಹಾರಿಸಿದರೆ ಪೊಲೀಸರ ಮೂಲಕ ಧ್ವಜ ಇಳಿಸುವ ಕೆಲಸ ಮಾಡುವ ಮೂಲಕ ದರ್ಪ ಮೆರೆಯುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಪ್ರಧಾನಿ ಮೋದಿ ಆಡಳಿತದಲ್ಲಿ ದೇಶಕ್ಕೆ ಬಂದಷ್ಟು ಹಿರಿಮೆ, ಗರಿಮೆಯನ್ನು ಎಲ್ಲರೂ ಗಮನಿಸಬೇಕಾಗಿದೆ. ಆರು ದಶಕಗಳ ಕಾಲ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್‌ಗೆ ದೇಶವನ್ನು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ಸಾಧ್ಯವಾಗಲಿಲ್ಲ. ಮೋದಿ ಪ್ರಧಾನಿಯಾದ ನಂತರ ಜಗತ್ತು ನಮ್ಮತ್ತ ನೋಡುವಂತಾಗಿದೆ ಎಂದರು.
ಮಾಜಿ ಸಂಸದ ಬಿ.ವಿ.ನಾಯಕ ಮಾತನಾಡಿ, ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಪಕ್ಷಕ್ಕೆ ಬಲ ಬಂದಂತಾಗಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಸುವ ಮೂಲಕ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕರಾದ ರಾಜುಗೌಡ, ಪಿ.ರಾಜೀವ್, ಎ.ಪಾಪಾರೆಡ್ಡಿ, ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ಶಶಿಕಲಾ ಟೆಂಗಳಿ, ಶರಣು ತರಿಕೇರಿ, ಚಂದ್ರಶೇಖರ ಪಾಟೀಲ್ ಉಪಸ್ಥಿತರಿದ್ದರು.