ಜಿಲ್ಲೆ

ಮಿಂಚು ಪ್ರತಿಬಂಧಕ ಪ್ರಸ್ತಾವನೆಗೆ ಸಿಡಿಲು!, ದ.ಕ ಹಾಗೂ ಉಡುಪಿ ಜಿಲ್ಲೆಯ ಒಟ್ಟು 20 ಕಡೆ ಲೈಟ್ನಿಂಗ್ ಆರೆಸ್ಟರ್ ಅಳವಡಿಕೆ ಯೊಜನಾ ಪ್ರಸ್ತಾವಣೆ

Mangaluru - Shravan Kumar Nala

-ಶ್ರವಣ್‌ಕುಮಾರ್ ನಾಳ, ಮಂಗಳೂರು

ಮುಂಗಾರು ಪೂರ್ವ ಹಾಗೂ ಮುಂಗಾರು ನಂತರದ ದಿನಗಳಲ್ಲಿ ಕರಾವಳಿಯಲ್ಲಿ ಹೆಚ್ಚು ಹಾನಿ ಮಾಡುವ ಸಿಡಿಲು, ಮಿಂಚುಗೆ ಪರಿಹಾರ ಕಲ್ಪಿಸುವ ಮಿಂಚು ಪ್ರತಿಬಂಧಕ (ಲೈಟ್ನಿಂಗ್ ಆರೆಸ್ಟರ್) ಅಳವಡಿಕೆ ಯೋಜನೆಗೆ ಸಿಡಿಲು ಬಡಿದಿದೆ. ದ.ಕ ಜಿಲ್ಲೆಯಲ್ಲಿ 13 ಕಡೆ, ಉಡುಪಿ ಜಿಲ್ಲೆಯ 7 ಕಡೆ ಲೈಟ್ನಿಂಗ್ ಆರೆಸ್ಟರ್ ಅಳವಡಿಕೆ ಯೋಜನೆಯನ್ನು ಸರ್ಕಾರ ಪೂರ್ಣಪ್ರಮಾಣದಲ್ಲಿ ಕೈಬಿಟದ್ಟಿದೆ.

ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಭೀತಿ ಹುಟ್ಟಿಸಿರುವ ಸಿಡಿಲಿನ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಒಟ್ಟು 20 ಕಡೆ ಸಿಡಿಲು ನಿರೋಧಕ ಅಳವಡಿಕೆಗೆ 2005, 2007, 2010, 2014, 2015ರಲ್ಲಿ ಪ್ರತ್ಯೇಕವಾಗಿ ಯೋಜನಾ ಪ್ರಸ್ಥಾವಣೆ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. 2014ರ ಮೇ.30 ರಂದು ಅಂದಿನ ಪುತ್ತೂರು ತಹಸೀಲ್ದಾರ್ ಎಂ.ಟಿ.ಕುಳ್ಳೇಗೌಡ ಈ ಬಗ್ಗೆ ವೈಜ್ಞಾನಿಕ ವರದಿ ಸಲ್ಲಿಸಿದ್ದರೂ ಪ್ರಾಯೋಗಿಕವಾಗಿಯೂ ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಿಲ್ಲ. ಒಂದು ಸಿಡಿಲು ನಿರೋಧಕವು ಅದರ ಸುತ್ತಳತೆಯ ಕನಿಷ್ಠ 8 ಕಿ.ಮೀ. ಪ್ರದೇಶದಲ್ಲಿಯಾದರೂ ಸಿಡಿಲಿನ ಅವಘಡ ಸಂಭವಿಸದಂತೆ ತಡೆಯಲು ಸಾಧ್ಯವಾಗಬೇಕು ಮತ್ತು ಇದನ್ನು ಪ್ರಾಯೋಗಿಕವಾಗಿಯೂ ಸಾಬೀತು ಪಡಿಸಬೇಕು. ಹಾಗಾದರೆ ಮಾತ್ರ ಈ ಯೋಜನಾ ಪ್ರಸ್ತಾವಣೆಗೆ ಅನುದಾನವನ್ನು ನೀಡಬಹುದು ಎಂದು ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ ನೀಡಿದರೂ ಪ್ರಾಯೋಗಿಕ ಸಾಬೀತು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಲೈಟ್ನಿಂಗ್ ಆರೆಸ್ಟರ್ ಪ್ರಸ್ತಾವಣಾ ಯೋಜನೆಯನ್ನೆ ಸರ್ಕಾರ ಕೈಬಿಟ್ಟಿದೆ.

*40 ಲಕ್ಷ ರೂ. ವೆಚ್ಚದ ಯೋಜನೆ

ದ.ಕ ಜಿಲ್ಲೆಯಲ್ಲಿ 13 ಕಡೆ ಮಿಂಚು ಪ್ರತಿಬಂಧಕ (ಲೈಟ್ನಿಂಗ್ ಆರೆಸ್ಟರ್) ಅಳವಡಿಕೆ ಕುರಿತು ಜಿಲ್ಲಾಡಳಿತ 25 ಲಕ್ಷ ರೂ., ಉಡುಪಿ ಜಿಲ್ಲೆಯ 15 ಲಕ್ಷ ರೂ. ವೆಚ್ಚದಲ್ಲಿ 7 ಕಡೆ ವೆಚ್ಚದ ಪ್ರಸ್ತಾವನೆ ರೂಪಿಸಿ ರಾಜ್ಯ ಕಂದಾಯ ಇಲಾಖೆಗೆ ವಿವಿಧ ಹಂತದಲ್ಲಿ ಪರಿಸ್ಕರಿಸಿ ವರದಿ ಸಲ್ಲಿಸಿತ್ತು. ಬ್ರಹ್ಮಾವರ ಹಾಗೂ ಪುತ್ತೂರಿನ ಒಳಮೊಗ್ರು ಗ್ರಾಮದದಲ್ಲಿ ಪ್ರಾಯೋಗಿಕ ಲೈಟ್ನಿಂಗ್ ಆರೆಸ್ಟರ್ ಅಳವಡಿಕೆ ಕುರಿತು ಪ್ರತ್ಯೇಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಮಧ್ಯೆ 2014ರಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು, ನೆಟ್ಟಣಿಗೆ ಮುಡ್ನೂರು, ಕೆಯ್ಯೂರು, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಕಬಕ, ಗೋಳಿತೊಟ್ಟು ಮತ್ತು ಕೊಣಾಜೆ ಪ್ರದೇಶದಲ್ಲಿ ಸಿಡಿಲು ನಿರೋಧಕ ಉಪಕರಣಗಳನ್ನು ಸ್ಥಾಪಿಸುವಂತೆ ಕಂದಾಯ ಇಲಾಖೆ ಸ್ಥಳ ಗುರುತಿಸಿ ಪ್ರತ್ಯೇಕ ಪ್ರಸ್ತಾವಣೆಯನ್ನೂ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ವೈಜ್ಞಾನಿಕವಲ್ಲದ ಈ ಪ್ರಸ್ತಾವಣೆಯನ್ನು ಅದೇ ವರ್ಷ ಸರ್ಕಾರ ತಿರಸ್ಕರಿಸಿದೆ.

-----------------

ಎಲ್ಲೆಲ್ಲಿ ಮಿಂಚು ಪ್ರತಿಬಂಧಕ ಅಳವಡಿಕೆ

ಮಂಗಳೂರು ತಾಲೂಕಿನ ಅಂಬ್ಲಮೊಗರು-ಕೋಣಾಜೆ ಗ್ರಾಮದ ಗಡಿ ಪ್ರದೇಶ, ಮಂಜನಾಡಿ ಗ್ರಾ.ಪಂ.ನ ಮಂಜನಾಡಿ ಗ್ರಾಮದ ಉರುಮನೆ, ಮೆನ್ನಬೆಟ್ಟು ಗ್ರಾ.ಪಂ.ನ ಸಾರ್ವಜನಿಕ ಸ್ಮಶಾನ ಪರಿಸರ, ಗುರುಪುರ ಗ್ರಾ. ಪಂ. ಕಚೇರಿ ವ್ಯಾಪ್ತಿ, ಪೆರ್ಮುದೆ ಗ್ರಾ.ಪಂ.ನ ಪೆರ್ಮುದೆ ಗ್ರಾಮ ವ್ಯಾಪ್ತಿ, ಪುತ್ತೂರು ತಾಲೂಕಿನ ಒಳಮೊಗರು ಗ್ರಾ.ಪಂ.ನ ಗ್ರಾ. ಪಂ. ಕಚೇರಿ, ಕಡಬದ ಕೊಡಿಂಬಾಳ ದೊಡ್ಡಕೊಪ್ಪ, ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾ.ಪಂ.ನ ಬೊಳ್ಮನಾರು, ಸುಳ್ಯ ತಾಲೂಕಿನ ಜಾಲೂರು ಗ್ರಾ.ಪಂ.ನ ಗ್ರಾ.ಪಂ. ಕಚೇರಿ, ದೇವಚಳ್ಳ ಗ್ರಾ.ಪಂ.ನ ಗ್ರಾ.ಪಂ. ವ್ಯಾಪ್ತಿ ಹಾಗೂ ಮೂಡುಬಿದರೆಯ ಶಿರ್ತಾಡಿ ಅಂಚೆ ಕಚೇರಿ ಬಳಿ, ಬ್ರಹ್ಮಾವರ, ಸಿದ್ದಾಪುರ, ಉಡುಪಿ ಜಿಲ್ಲಾಕೇಂದ್ರ, ಮಣಿಪಾಲ ಎಂಡ್, ಹಾರಾಡಿ, ಕಾರ್ಕಳ ತಾಲೂಕು ಕೇಂದ್ರ, ಬೈಲೂರು ಕೆರೆ ಬಳಿ ಮಿಂಚು ಪ್ರತಿಬಂಧಕ ಅಲವಡಿಸುವ ಬಗ್ಗೆ ಪ್ರಸ್ತಾವಣೆಯಲ್ಲಿ ಸೂಚಿಸಿದೆ.

------------------

ಸುಬ್ರಹ್ಮಣ್ಯ ಸುಳ್ಯ, ಕಡಬ, ಪುತ್ತೂರು ಭಾಗದಲ್ಲಿ ಪ್ರತಿ ವರ್ಷ ಹೆಚ್ಚಾಗಿ ಸಿಡಿಲಿನ ಅಪಾಯ ಇದೆ. ಅಪಾಯಗಳಾದಗ ಮಾತ್ರ ಮಿಂಚು ಪ್ರತಿಬಂಧಕ ಬೇಕು ಎಂಬ ಬೇಡಿಕೆಗಳು ಬರುತ್ತಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಸಿ ಇಬ್ರಾಹಿಂ ಅವರು ಈಬಗ್ಗೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿರುವ ಮಾಹಿತಿ ಇದೆ. ಈ ಹಿಂದಿನ ಪ್ರಸ್ತಾವಣೆಯಲ್ಲಿ ಏನಿತ್ತು ಎಂಬುವುದು ತಿಳಿದಿಲ್ಲ. ಹೊಸ ಯೋಜನಾ ಪ್ರಸ್ತಾವಣೆಯನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ