ಬಾಳೆಹೊನ್ನೂರು: ಮುದುಗುಣಿ ಗ್ರಾಮದ ಶಿವಗಂಗಾಮಠದ (ಅಜ್ಜಯ್ಯನವರ ಮಠ) ಸಿದ್ದೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳ ಸುಗ್ಗಿಹಬ್ಬ, ಕೆಂಡಾರ್ಚನೆ ಮಹೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.
ಸುಗ್ಗಿಹಬ್ಬ ಹಾಗೂ ಕೆಂಡಾರ್ಚನೆ ಅಂಗವಾಗಿ ಸಿದ್ದೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಉತ್ಸವ ಮೂರ್ತಿಯೊಂದಿಗೆ ಬಂಡಿಹಳ್ಳ, ಮೇಗರಮಕ್ಕಿ. ಆಡುವಳ್ಳಿ, ಬನ್ನೂರು, ಬೈರನಮಕ್ಕಿ, ಪೇಟೆಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮದ 20ಕ್ಕೂ ವಿವಿಧ ದೇವರುಗಳ ಉತ್ಸವ ಮೂರ್ತಿಯೊಂದಿಗೆ ಭದ್ರಾನದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಲಾಯಿತು.
ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ಕೆಂಡದ ರಾಶಿಗೆ ಧಾರ್ಮಿಕ ವಿಧಿವಿಧಾನದೊಂದಿಗೆ ಪೂಜೆ ಸಲ್ಲಿಸಿ ಸಿದ್ದೇಶ್ವರಸ್ವಾಮಿ ಸೇರಿದಂತೆ ಎಲ್ಲ ಗ್ರಾಮಗಳ ಗ್ರಾಮದೇವತೆಗಳ ಉತ್ಸವ ಮೂರ್ತಿಯೊಂದಿಗೆ ಕೆಂಡ ಹಾಯಲಾಯಿತು. ನಂತರ ಸಾವಿರಾರು ಭಕ್ತರು ಕೆಂಡಹಾಯ್ದು ಭಕ್ತಿ ಸಮರ್ಪಿಸಿದರು. ಸುಗ್ಗಿಹಬ್ಬದ ಅಂಗವಾಗಿ ಶ್ರೀದೇವರಿಗೆ ಹರಕೆ, ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿ ದೇವರ ಮುಡಿಗಂಧ ಪ್ರಸಾದ ಸ್ವೀಕರಿಸಿದರು. ಶ್ರೀರಂಭಾಪುರಿ ಪೀಠದ ಅರ್ಚಕರಾದ ಬಸವರಾಜ್ ಶಾಸ್ತ್ರಿ, ಪ್ರಕಾಶ್ ಶಾಸ್ತ್ರಿ, ಗಿರೀಶ್ ಮಹಾದೇವಯ್ಯ ಸಂಗಡಿಗರು ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಸುಗ್ಗಿ ಹಬ್ಬದ ಅಂಗವಾಗಿ ಸೋಮವಾರ ದೇವರ ಉತ್ಸವ ಗಿರಿ ಹತ್ತುವುದು, ಗಂಗೆ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ರಾತ್ರಿ ಸ್ಥಳೀಯ ಕಲಾವಿದರಿಗೆ ಹಲಗೆ ಓಲಗದ ಸ್ಪರ್ಧೆ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪಗೌಡ, ಕಾರ್ಯದರ್ಶಿ ಸಿ.ವಿ.ಸುನೀಲ್, ಪ್ರಮುಖರಾದ ಪುಷ್ಪಾ ರಾಜೇಗೌಡ, ಎಂ.ಆರ್.ಮಂಜುನಾಥಗೌಡ, ಎಂ.ಡಿ.ಶಿವರಾಮ್, ಎಂ.ಆರ್.ಜಗದೀಶ್, ಸದಾಶಿವ ಆಚಾರ್ಯ, ಪ್ರಕಾಶ್ ಮುದುಗುಣಿ, ಎಂ.ಎಸ್.ಅರುಣೇಶ್, ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಮುದುಗುಣಿ, ಸೀಕೆ, ಬಾಳೆಗದ್ದೆ, ಬಾಳೆಹೊನ್ನೂರು, ಬಂಡಿಹಳ್ಳ, ಆಡುವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಾಲ್ಕು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ದೇವರ ಪ್ರಸಾದ, ಅನ್ನ ಪ್ರಸಾದ ಸ್ವೀಕರಿಸಿದರು.