ರೇವತಗಾಂವ: ಸಿದ್ಧೇಶ್ವರ ಸ್ವಾಮೀಜಿ ಪ್ರತಿ ಕ್ಷಣವೂ ನಮ್ಮ ನೆನೆಪಿನಲ್ಲಿಯೇ ಇರುತ್ತಾರೆ. ಮರೆಯಲಾಗದ ಮಾಣಿಕ್ಯವಾದ ಅವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಸಾರ್ಥಕದ ಜೀವನ ನಡೆಸಬೇಕು ಎಂದು ಕಾತ್ರಾಳದ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ನಡೆದಾಡುವ ದೇವರು, ಶತಮಾನದ ಸಂತ ಎಂದೇ ಖ್ಯಾತಿ ಪಡೆದಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಎರಡು ವರ್ಷದ ಹಿನ್ನೆಲೆಯಲ್ಲಿ ರೇವತಗಾಂವ ಗ್ರಾಮದ ಸಿಂಹಗಢ ಮಹಾರಾಜರ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ಧೇಶ್ವರ ಅಪ್ಪಾಜಿ ಅವರನ್ನು ಲಕ್ಷಾಂತರು ಭಕ್ತರು ಜಗತ್ತಿನಾದ್ಯಂತ ಪೂಜಿಸುತ್ತಾರೆ. ಅವರು ನಡೆದಾಡಿದ ಭೂಮಿಯಲ್ಲಿ ನಾವೆಲ್ಲರೂ ಜನಿಸಿದ್ದೇ ನಮ್ಮ ಪುಣ್ಯ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಧಾರವಾಡದ ಶಿವಾನಂದ ಮಠದ ಬಸವಾನಂದ ಶ್ರೀಗಳು ಮಾತನಾಡಿ, ಶ್ರೀಗಳ ಆದರ್ಶಪ್ರಾಯವಾದ ಬದುಕು, ಪ್ರವಚನ, ನೀತಿ ಬೋಧನೆಯನ್ನು ಭಕ್ತರು, ಅನುಯಾಯಿಗಳು ಪ್ರತಿದಿನವೂ ಮೆಲುಕು ಹಾಕುವ ಮೂಲಕ ಪ್ರಕೃತಿ, ಪರಿಸರ ಸೇರಿ ಎಲ್ಲೆಲ್ಲೂ ಅವರನ್ನೇ ಕಾಣತೊಡಗಿದ್ದಾರೆ. ಹೀಗೆ ಶ್ರೀಗಳು ತಮ್ಮ ತಮ್ಮ ರೀತಿಯಲ್ಲಿ ಜೀವಂತವಾಗಿಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಗೋಡ ಚಿಂಚೋಳಿಯ ಸಿದ್ಧರಾಮೇಶ್ವರ ಮಠದ ಪಟ್ಟದದೇವರಾದ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ಶ್ರೀಗಳು ಇಡೀ ಪ್ರಪಂಚದಾದ್ಯಂತ ಇಂಗ್ಲಿಷ್ ಸೇರಿ ಹಲವಾರು ಭಾಷೆಗಳಲ್ಲಿ ಜ್ಞಾನ ದಾಸೋಹ ಮಾಡಿದಂಥವರು ಸಿದ್ಧೇಶ್ವರ ಅಪ್ಪಾಜಿಯಾಗಿದ್ದಾರೆ. ಪ್ರತಿ ಹಳ್ಳಿ-ಹಳ್ಳಿಗೂ, ದೇಶ-ವಿದೇಶಕ್ಕೂ ತಮ್ಮ ಜ್ಞಾನ ಭಂಡಾರವನ್ನು ಹಂಚಿದಂಥವರು ಎಂದರು.
ಶ್ರೀಗಳ ಭಾವಚಿತ್ರ ಮೆರವಣಿಗೆ: ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಿಂದ ಭಾವಚಿತ್ರ ಮೆರವಣಿಗೆ ಮುತ್ತೈದೆಯರ ಕುಂಭ-ಕಳಸ, ಆರತಿಗಳೊಂದಿಗೆ ವಿವಿಧ ವಾದ್ಯ-ವೈಭವಗಳೊಂದಿಗೆ ಎತ್ತಿನ ಬಂಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಶ್ರೀಗಳ ಕುರಿತು ಜೈಘೋಷಗಳನ್ನು ಹಾಕುತ್ತ ಸಿಂಹಗಢ ಮಹಾರಾಜರ ವೇದಿಕೆ ತಲುಪಿತು. ಗ್ರಾಮದ ಸಾಧಕ ರೈತರನ್ನು ಸನ್ಮಾನಿಸಲಾಯಿತು.