ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿ 95ನೇ ಪುಣ್ಯಾರಾಧನೆ ಸಪ್ತಾಹ ಏರ್ಪಡಿಸಲಾಗಿದ್ದು, ಆಗಸ್ಟ್ 20ರಂದು ಸಂಜೆ ಜಲರಥೋತ್ಸವ ಭಕ್ತಿಭಾವದಿಂದ ಜರುಗಲಿದೆ ಎಂದು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ತಿಳಿಸಿದರು.
ನಗರದ ಶ್ರೀಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ವಾದ್ಯಮೇಳದೊಂದಿಗೆ ಶ್ರೀಗಳ ಪಲ್ಲಕ್ಕಿ ಉತ್ಸವ ನಗರದಲ್ಲಿ ಸಂಚರಿಸಿದೆ. ಪಲ್ಲಕ್ಕಿ ಉತ್ಸವ ಶ್ರೀ ಮಠಕ್ಕೆ ಮರಳಿದ ನಂತರ ಸಂಜೆ 5.30ಕ್ಕೆ ಮಠದ ಆವರಣದ ಪುಷ್ಕರಣಿಯಲ್ಲಿ ಮಹಾಪೂಜೆ, ಜಲರಥೋತ್ಸವ ಭಕ್ತಸಾಗರದ ಮಧ್ಯೆ ನಡೆಯಲಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮೊದಲಾದೆಡೆಯಿಂದ ಅಸಂಖ್ಯ ಭಕ್ತರು ಸೇರಲಿದ್ದಾರೆ ಎಂದರು.
ಶ್ರೀ ಸಿದ್ಧಾರೂಢರ ಸಮಾಧಿಗೆ ರುದ್ರಾಭಿಷೇಕ ನೆರವೇರಿಸಿ ಪುಣ್ಯಾರಾಧನೆ ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ. ಆ. 20ರ ವರೆಗೆ ಕೈಲಾಸ ಮಂಟಪದಲ್ಲಿ ಬೆಳಗ್ಗೆ 7.45ಕ್ಕೆ ಶಿವಾನಂದ ಜೋಶಿ ಅವರಿಂದ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, 9.30ಕ್ಕೆ ಶಾಸ್ತ್ರ ಪ್ರವಚನ, ಸಂಜೆ 5ಕ್ಕೆ ಕೀರ್ತನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಮಠದಲ್ಲಿ ಬೆಳ್ಳಿ ಆನೆ ಅಂಬಾರಿ ಅಳವಡಿಕೆ, ಶ್ರೀ ಮಠದ ಆವರಣದಲ್ಲಿ 100ಕ್ಕೂ ಹೆಚ್ಚು ಕೊಠಡಿಗಳು, ಶೌಚಗೃಹಗಳ ನಿರ್ಮಾಣ, ಭಕ್ತರಿಗೆ ಚಾಪೆ, ತಲೆದಿಂಬು ನೀಡಿಕೆ, ಸಿದ್ಧಾರೂಢರ ತತ್ವಗಳುಳ್ಳ 108 ಗ್ರಂಥಗಳ ಮುದ್ರಣ, ಅತ್ಯಾಧುನಿಕ ಸೌಲಭ್ಯವುಳ್ಳ ಅಡುಗೆಮನೆ, ಅಂಚಟಗೇರಿಯಲ್ಲಿ ಪತ್ರಿವನ, ಗೋಕೇಂದ್ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಶಿವರಾತ್ರಿಯೊಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿ, 2025ರ ಫೆಬ್ರವರಿಯಲ್ಲಿ ಮಠದಲ್ಲಿ ವಿಶ್ವವೇದಾಂತ ಪರಿಷತ್ ನಡೆಯಲಿದ್ದು, 500ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳುವರು ಎಂದರು.
ಸಾಕ್ಷಾತ್ ಶಿವನ ಅವತಾರಿಯಾದ ಸದ್ಗುರು ಶ್ರೀ ಸಿದ್ಧಾರೂಢರ ಪುಣ್ಯಾರಾಧನೆಯು ಪ್ರತಿ ವರ್ಷ ಭಕ್ತಿಭಾವದಿಂದ ನಡೆಯುತ್ತದೆ. ಶ್ರಾವಣ ಜಲರಥೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತ ಸಮೂಹ ಹೆಚ್ಚುತ್ತ ನಡೆದಿದೆ ಎಂದು ಹೇಳಿದರು.
ಜಲರಥೋತ್ಸವ ನಡೆಯುವ ಹೊಂಡದ ಸುತ್ತಲೂ ಭಕ್ತರು ವೀಕ್ಷಣೆಗೆ ಕುಳಿತುಕೊಳ್ಳಲು ಹಾಗೂ ನಿಂತುಕೊಳ್ಳಲು ಸಕಲ ವ್ಯವಸ್ಥೆ ಮಾಡಲಾಗುವುದು. ಹೊಂಡದ ಸುತ್ತ ಸ್ಟೆಪ್ಗಳನ್ನು ಮಾಡಿ ಸುತ್ತಲಿನ ಪ್ರದೇಶದಲ್ಲಿ ಭಕ್ತರಿಗಾಗಿ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಧರ್ಮದರ್ಶಿ ಬಾಳು ಮಗಜಿಕೊಂಡಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಒಂದು ಕೋಟಿ ರೂ. ನೀಡುವ ವಾಗ್ದಾನ ಮಾಡಿತ್ತು. ಆದರೆ, ಇದುವರೆಗೆ ಅರ್ಧ ಮಾತ್ರ ಬಂದಿದೆ. ಅದರಲ್ಲಿ ಡಾರ್ಮಿಟರಿ, ಇತರ ಕೆಲಸಗಳನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಶ್ರೀಮಠದ ಪುರಾತನ ಕೆರೆಯನ್ನು ಆಧುನೀಕರಣ ಮತ್ತು ಸೌಂದರೀಕರಣ ಮಾಡುವುದು, ಸಾಧು ಭವನ, ಗುರುಕುಲ ಸ್ಥಾಪನೆ, ಸದ್ಗುರು ಶ್ರೀ ಗುರುನಾಥರೂಢ ಸ್ವಾಮಿಗಳವರ ಸಮಾಧಿ ಮಂದಿರದ ಗೋಪುರ ಕಳಸಕ್ಕೆ ಬಂಗಾರ ಲೇಪನ ಮಾಡಿಸುವುದು. ಸದ್ಗುರು ಸಿದ್ಧಾರೂಢ ಸಂಶೋಧನಾ ಕೇಂದ್ರ ತೆರೆಯುವುದು ಸೇರಿ ವಿವಿಧ ಕಾರ್ಯಗಳನ್ನು ಮಾಡುವ ಆಶಯ ವ್ಯಕ್ತಪಡಿಸಿದರು.
ಕಮಿಟಿ ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಚನ್ನವಿರ ಮುಂಗುರವಾಡಿ, ಉದಯಕುಮಾರ ನಾಯ್ಕ, ವಿನಾಯಕ ಘೋಡ್ಕೆ, ಮ್ಯಾನೇಜರ ಈರಣ್ಣ ತುಪ್ಪದ ಉಪಸ್ಥಿತರಿದ್ದರು.