ಚಿಕ್ಕಮಗಳೂರು: ಎಕನಾಮಿಕ್ಸ್ ರೀತಿಯ ಸಿದ್ದರಾಮಿಕ್ಸ್ ಎಂಬುದು ಒಂದಿದೆ. ಗಂಡನ ಬಳಿ ಕಿತ್ತುಕೊಂಡು ಹೆಂಡತಿಗೆ ನೀಡುವುದೇ ಸಿದ್ದರಾಮಿಕ್ಸ್. ಇದನ್ನೇ ಸಿದ್ದರಾಮಯ್ಯ ತಮ್ಮ ಗ್ಯಾರಂಟಿ ಯೋಜನೆಗಲ್ಲಿ ಅನುಷ್ಠಾನ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಲೇವಡಿ ಮಾಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಆಲ್ದೂರು ಮಂಡಲ ಬಿಜೆಪಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನೀಡಲು ಜನರಿಂದಲೇ ಹೇಗೆ ರಾಜ್ಯ ಸರ್ಕಾರ ವಸೂಲಿ ಮಾಡುತ್ತಿದೆ ಎಂಬುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಹಿಂದೆ ಒಂದು ಪಹಣಿ ತೆಗೆದುಕೊಳ್ಳಲು 15 ರೂಪಾಯಿ ನೀಡಬೇಕಿತ್ತು. ಆದರೆ ಈಗ 50 ರೂಪಾಯಿ ತೆರಬೇಕಿದೆ. 20 ರೂಪಾಯಿ ಸ್ಟ್ಯಾಂಪ್ ಪೇಪರ್ ಇಲ್ಲವೇ ಇಲ್ಲ. ಸ್ಟಾಂಪ್ ಡ್ಯೂಟಿ, ಎಕ್ಸೈಸ್ ಡ್ಯೂಟಿ, ರಿಜಿಸ್ಟ್ರೇಷನ್ ಫೀಸ್ ಹೀಗೆ ಎಲ್ಲವನ್ನೂ ಹೆಚ್ಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸಿಗರು ಗ್ಯಾರಂಟಿ ಎನ್ನುವ ಎರೆಹುಳು ಸಿಕ್ಕಿಸಿದ್ದು ಅಧಿಕಾರ ಎಂಬ ಮೀನನ್ನು ಹಿಡಿಯಲೇ ಹೊರತು ಬಡವರನ್ನು ಉದ್ದಾರ ಮಾಡಲು ಅಲ್ಲ. ರೈತರು ಒಂದು ಟ್ರಾನ್ಸ್ಫಾರ್ಮರ್ ಅಳವಡಿಸಿಕೊಳ್ಳಲು ಮೂರರಿಂದ ಐದು ಲಕ್ಷ ರೂಪಾಯಿ ಖರ್ಚು ಮಾಡಬೇಕಿದೆ. ಇದನ್ನೆಲ್ಲ ಗಮನಿಸಿದಾಗ ರಾಜ್ಯದಲ್ಲಿರುವುದು ರೈತರ ಪರವಾದ ಸರ್ಕಾರವಲ್ಲ ಬದಲಿಗೆ ಮನೆಹಾಳು ಸರ್ಕಾರ ಎಂಬುದು ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ಹೋಗಿ ಸರ್ಕಾರದ ಹಣದಲ್ಲಿ ಗ್ಯಾರಂಟಿ ಸಮಾವೇಶ ಮಾಡುತ್ತಿದ್ದಾರೆ. ಈ ಸಮಾವೇಶಗಳಲ್ಲಿ ಶೇ. 1ರಷ್ಟು ಸಹ ಅವರ ಸಾಧನೆಯನ್ನು ಹೇಳಿಕೊಳ್ಳುತ್ತಿಲ್ಲ. ಬದಲಿಗೆ ಎಲ್ಲೆಡೆಯು ಪ್ರಧಾನಿ ಮೋದಿಯವರನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ. ಇನ್ನು ನನ್ನ ವಿರುದ್ಧ ಟೀಕೆ ಮಾಡದಿದ್ದರೆ ಕಾಂಗ್ರೆಸ್ ನಾಯಕರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಹೀಗಾಗಿ ಪದೇ ಪದೇ ಟೀಕೆ ಮುಂದುವರೆಸಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ 307 ಕೇಸು ದಾಖಲಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಏನು ಮಾಡದಿದ್ದರೂ ಈ ರೀತಿ ಕೇಸುಗಳನ್ನು ದಾಖಲಿಸುವ ಮೂಲಕ ನೀವು ಏನನ್ನಾದರೂ ಮಾಡಿದರೂ ಇದೇ ಕೇಸುಗಳನ್ನು ದಾಖಲಿಸುತ್ತೇವೆ ಎಂದು ಪ್ರಚೋದನೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಜೊತೆಗೆ ಬಿಜೆಪಿ ಕಾರ್ಯಕರ್ತರನ್ನು ಗಡಿಪಾರು ಮಾಡಲು ಆದೇಶ ಹೊರಡಿಸಲಾಗುತ್ತಿದೆ. ಆದರೆ ಪಾಕಿಸ್ತಾನದ ಪರ ವಿಧಾನಸೌಧದಲ್ಲಿ ಘೋಷಣೆ ಕೂಗಿದವರನ್ನು ದೇಶದಿಂದ ಗಡಿಪಾರು ಮಾಡುವ ತಾಕತ್ತು ಈ ಸರ್ಕಾರಕ್ಕಿಲ್ಲ ಎಂದು ಕುಟುಕಿದರು.
ನಮ್ಮನ್ನು ಗಡಿಪಾರು ಮಾಡುತ್ತೇವೆ ಎನ್ನುತ್ತಿದ್ದವರನ್ನು ನಾವು ಅಧಿಕಾರದಿಂದಲೇ ಗಡಿಪಾರು ಮಾಡಿದ್ದೇವೆ. ಈಗಲೂ ಅಷ್ಟೇ ಬಿಜೆಪಿ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತೇವೆ ಎಂದು ಆದೇಶ ಹೊರಡಿಸುತ್ತಿರುವ ಸರ್ಕಾರವನ್ನು ಅಧಿಕಾರದಿಂದಲೇ ಗಡಿಪಾರು ಮಾಡೋಣ ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆ ದೇಶದ ಚುನಾವಣೆ. ನಮ್ಮ ವಿರೋಧಿಗಳು ಈಗಾಗಲೇ ಬಿಜೆಪಿ ವಿರುದ್ಧ ಸಂಚುರೂಪಿಸಲು ಆರಂಭಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಆಲ್ದೂರು ಬಿಜೆಪಿ ಮಂಡಲ ಅಧ್ಯಕ್ಷ ರವಿ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಒಂದರ ಹೀಂದೊಂದರಂತೆ ಚುನಾವಣೆಗಳು ಬರಲಿವೆ ಹೀಗಾಗಿ ಲೋಕಸಭೆ ಜೊತೆಗೆ ಉಳಿದ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಪ್ರಮುಖರಾದ ದೀಪಕ್ ದೊಡ್ಡಯ್ಯ, ಪುಣ್ಯಪಾಲ್, ರವೀಂದ್ರ ಬೆಳವಾಡಿ ಮತ್ತಿತರರಿದ್ದರು.