ಜಿಲ್ಲೆ

ಸಿದ್ಧಾಂತ ಶಿಖಾಮಣಿ ಜನರನ್ನು ಬದುಕಿಸುವ ಸಂಜೀವಿನಿ

ನರೇಗಲ್ಲ: ಹುಟ್ಟಿನಿಂದ ಸಾಯುವವರೆಗೂ ನಾವು ಜೀವನ ನಡೆಸುತ್ತೇವೆ. ಜೀವನ ನಡೆಸಲು ಅದಕ್ಕೆ ತನ್ನದೇ ಆದ ನಿಯಮವಿದೆ. ಈ ರೀತಿ ನಿಯಮ ತಿಳಿಸಿ, ಜನರನ್ನು ಬದುಕಿಸುವ ಸಂಜೀವಿನಿ ಯಾವುದಾದರೂ ಇದ್ದರೆ ಅದು ಸಿದ್ಧಾಂತ ಶಿಖಾಮಣಿ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಸಮೀಪದ ಕೋಚಲಾಪೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಎರಡು ದಿನಗಳ ಕಾಲ ನಡೆಯುವ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಆಶೀರ್ವಚನ ನೀಡಿದರು.

ಸಿದ್ಧಾಂತ ಶಿಖಾಮಣಿ ಗ್ರಂಥವು ಮಾನವನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ತಿಳಿಸುತ್ತದೆ. ಆಗೀಗ ನಿಮ್ಮ ಕಿವಿಗಳ ಮೇಲೆ ಆಧ್ಯಾತ್ಮಿಕಕ್ಕೆ ಸಂಬಂಧಿಸಿದ ವಿಷಯಗಳು ಬೀಳುತ್ತಿದ್ದರೆ ನೀವು ಧರ್ಮ ಮಾರ್ಗದಲ್ಲಿರುತ್ತೀರಿ. ಅದಕ್ಕೆಂದೆ ಈ ಪ್ರವಚನ ಮಾಲಿಕೆ ಪ್ರಾರಂಭಿಸಿದ್ದೇವೆ. ಆಧ್ಯಾತ್ಮಿಕ ಪ್ರವಚನವು ಮನುಷ್ಯನ ದುಃಖ ಕಳೆಯುವ ದಿವ್ಯೌಷಧಿ. ಸಿದ್ಧಾಂತ ಶಿಖಾಮಣಿ ಕೇಳುವುದರಿಂದ ಮನಸು ಪ್ರಫುಲ್ಲಗೊಳ್ಳುತ್ತದೆ. ಇದರಿಂದ ನಿಮ್ಮ ವ್ಯಕ್ತಿತವೂ ವಿಕಸನಗೊಳ್ಳುತ್ತದೆ ಎಂದರು.

ಜನ್ಮಜನ್ಮಕ್ಕೂ ಅಂಟಿಕೊಂಡು ಬರುವುದು ಭವರೋಗ. ಈ ಭವರೋಗ ಕಳೆದು ನಿರಾಳತೆ ನೀಡುವ ಶಕ್ತಿ ಈ ಗ್ರಂಥದಲ್ಲಿದೆ. ಸದ್ಗುರುಗಳು ಭವರೋಗ ವಾಸಿ ಮಾಡಲೆಂದೆ ಅವತರಿಸಿ ಬಂದವರಾಗಿದ್ದು, ಅವರಿಂದ ಆಧ್ಯಾತ್ಮಿಕ ಪ್ರವಚನ ಕೇಳುವ ಮೂಲಕ ಭವರೋಗದ ಬಾಧೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ಧರ್ಮಕ್ಕೂ ತನ್ನದೇ ಆದ ಆಚರಣೆ ಇದೆ. ಇದನ್ನು ಆಯಾ ಧರ್ಮದವರು ಪಾಲಿಸಬೇಕು. ವೀರಶೈವ ಲಿಂಗಾಯತ ಧರ್ಮಕ್ಕೂ ಒಂದು ಆಚರಣೆ ಇದ್ದು, ನೀವು ನಿಮ್ಮ ಧರ್ಮದ ಆಚರಣೆಯನ್ನು ಮುನ್ನಡೆಸಿಕೊಂಡು ಬಂದರೆ ನಿಮ್ಮ ಮಕ್ಕಳು ಮತ್ತು ಪರಿವಾರ ಅದನ್ನು ಪಾಲಿಸಿಕೊಂಡು ಬರುತ್ತದೆ ಎಂದರು.

ಈಶ್ವರ ಬೆಟಗೇರಿ ನಿರೂಪಿಸಿದರು. ಎಸ್.ಕೆ. ಪಾಟೀಲ ಸ್ವಾಗತಿಸಿದರು. ಡಾ. ಆರ್.ಕೆ. ಗಚ್ಚಿನಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಚಲಾಪೂರ, ನರೇಗಲ್ಲ, ಸುತ್ತಲಿನ ಗ್ರಾಮಗಳ ಸದ್ಭಕ್ತರು ಪಾಲ್ಗೊಂಡಿದ್ದರು.