ಆಲೂರು ತಾಲೂಕಿನ ಪಾಳ್ಯ ಹೋಬಳಿ ಬಾಳೆಕೊಪ್ಪಲು ಗ್ರಾಮದ ಗಾಯತ್ರಿ ರುದ್ರೇಗೌಡರ ಮನೆಯಲ್ಲಿ ಜಗದ್ಗುರು ರೇಣುಕರ ಮನೆಗೆ ರೇಣುಕ ಮನ-ಮನಕೆ ರೇಣುಕ ಸಿದ್ಧಾಂತ ಶಿಖಾಮಣಿ ತತ್ವ ಪ್ರಸಾರ ಅಭಿಯಾನದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ.  
ಜಿಲ್ಲೆ

ಸಿದ್ಧಾಂತ ಶಿಖಾಮಣಿ ಜಾಗತಿಕ ಧರ್ಮಗ್ರಂಥ

ಮಾದೇಶ್ ತಿ.ನರಸೀಪುರ

ಆಲೂರು: ಎಲ್ಲ ಸಿದ್ಧಾಂತಗಳಿಗಿಂತ ಮೇಲಿನ ಸ್ತರದಲ್ಲಿರುವುದರಿಂದ ವೀರಶೈವ ಧರ್ಮದ ಪ್ರಮುಖ ಗ್ರಂಥವನ್ನು ಸಿದ್ಧಾಂತ ಶಿಖಾಮಣಿ ಎಂದು ಕರೆಯಲಾಗಿದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಕೊಪ್ಪಲು ಗ್ರಾಮದ ಗಾಯತ್ರಿ ರುದ್ರೇಗೌಡರ ಮನೆಯಲ್ಲಿ ಜಗದ್ಗುರು ರೇಣುಕರ ಮನೆಗೆ ರೇಣುಕ ಮನ-ಮನಕೆ ರೇಣುಕ ಸಿದ್ಧಾಂತ ಶಿಖಾಮಣಿ ತತ್ವ ಪ್ರಸಾರ ಅಭಿಯಾನ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿ, ಸಮಸ್ತ ಮನುಕುಲಕ್ಕೆ ಉಪದೇಶ ಮಾಡುವ ಗ್ರಂಥ ಸಿದ್ಧಾಂತ ಶಿಖಾಮಣಿ. ಇದನ್ನು ವೀರಶೈವ ಧರ್ಮಗ್ರಂಥ ಎಂದು ಕರೆದಿದ್ದರೂ ಅದು ವೀರಶೈವರಿಗಷ್ಟೇ ಸೀಮಿತವಾಗಿಲ್ಲ. ಜಗತ್ತಿನ ಎಲ್ಲ ಧರ್ಮದವರೂ ಇದನ್ನು ಓದುವುದರಿಂದ ಇದನ್ನು ಜಾಗತಿಕ ಧರ್ಮಗ್ರಂಥ ಎನ್ನಲಾಗಿದೆ ಎಂದು ತಿಳಿಸಿದರು.


ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ ಪಂಥಗಳ ಗಡಿ ಮೀರಿ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿದ ಕಾರುಣ್ಯಶೀಲರು. ನೊಂದವರ ಧ್ವನಿಯಾಗಿ ಸಕಲ ಸಮುದಾಯಗಳ ಶ್ರೇಯಸ್ಸನ್ನು ಬಯಸಿದವರು. ಜಗತ್ತಿನ ಕತ್ತಲೆಯನ್ನು ಕಳೆಯಲು ಸೂರ್ಯನಿದ್ದಂತೆ, ಬಾಳಿನ ಅಜ್ಞಾನ ನಿವಾರಿಸಲು ಗುರು ಬೇಕು. ಗುರು ಜ್ಞಾನದ ಸಂಕೇತ. ಅರಿವಿನ ಮಹಾಸಾಗರ, ಕರ್ಮದ ಕತ್ತಲೆ ಕಳೆದು ಧರ್ಮ ಬೀಜವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.


ವಿಶ್ವಬಂಧುತ್ವದ ಮಾನವೀಯತೆಯ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನ-ಮಂಥನಗಳು ಜನ ಸಮುದಾಯಕ್ಕೆ ದಾರಿದೀಪವಾಗಿವೆ. ಅಶಾಂತಿಯಿಂದ ತತ್ತರಿಸುತ್ತಿರುವ ಬದುಕಿಗೆ ಶಾಂತಿ ಸಂಸ್ಕಾರ ನೀಡಿದರು. ಸರ್ವಧರ್ಮಗಳ ಹಾಗೂ ಮಾನವನ ಸಂಬಂಧ, ಭಾವನೆಗಳನ್ನು ಶಿವಜ್ಞಾನದ ಮೂಲಕ ಬೆಸೆಯುವ ಕಾರ್ಯ ಮಾಡಿದ್ದು ಮನುಕುಲದ ಸೌಭಾಗ್ಯ ಎಂದು ಹೇಳಿದರು.


ರಾಧಮ್ಮ ಜನಸ್ಪಂದನ ಸಂಸ್ಥೆ ಅಧ್ಯಕ್ಷ ಹೇಮಂತ್ ಕುಮಾರ್, ಗ್ಯಾಸ್ ಮಂಜುನಾಥ್, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚಿಕ್ಕೋಟೆ ಮಹೇಶ್, ಶ್ರೀರಾಮ್ ಸೂಪರ್ ಮಾರ್ಕೆಟ್ ಮಾಲೀಕರಾದ ಕಿರಣ್, ಗ್ಯಾಸ್ ಮಂಜಣ್ಣ, ದೇವರಾಜ್ ಶಾಸ್ತ್ರಿ, ಯತೀಶ್ ಶಾಸ್ತ್ರಿ, ದರ್ಶನ ಆರಾಧ್ಯ ತಗರೆ ರೇವಪ್ಪ, ಬಸಂತ್, ಯಶವಂತ್ ಮನು, ವಿನಯ್ ಶೈವ ಮಲ್ನಾಡ್ ಇತರರು ಇದ್ದರು.