ನಿಡಗುಂದಿಯ ಜಿವಿವಿಎಸ್ ಕಾಲೇಜು ಆವರಣದಲ್ಲಿ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಸರ್ವಸಾಧಾರಣ ಸಭೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಧ್ಯಕ್ಷ ಸಿದ್ಧಣ್ಣ ನಾಗಠಾಣ, ಉಪಾಧ್ಯಕ್ಷ ಬಸವರಾಜ ಮುಚ್ಚಂಡಿ, ನಿರ್ದೇಶಕ ಮಂಡಳಿ ಇದ್ದರು. 
ಜಿಲ್ಲೆ

ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಸರ್ವಸಾಧಾರಣ ಸಭೆ

ನಿಡಗುಂದಿ: ಗ್ರಾಹಕರು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿದ್ಧಣ್ಣ ನಾಗಠಾಣ ಹೇಳಿದರು.

ಪಟ್ಟಣದ ಜಿವಿವಿಎಸ್ ಕಾಲೇಜು ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ನ 29ನೇ ಸರ್ವಸಾಧಾರಣ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಲ್ಪ ಬಂಡವಾಳದಲ್ಲಿ ಸ್ಥಾಪಿತವಾದ ಬ್ಯಾಂಕ್ ಎರಡು ದಶಕದಲ್ಲಿ ಹೆಮ್ಮರವಾಗಿ ಬೆಳೆದು ತನ್ನ ಉಪಶಾಖೆಯನ್ನು ತೆರೆದಿದೆ. ಗ್ರಾಮೀಣ ಭಾಗದ ರೈತರ ಬೆಳವಣಿಗೆಗೆ ಸಾಕಷ್ಟು ಸಾಲ ನೀಡಿ ರೈತ ಸ್ನೇಹಿಯಾಗಿದೆ. ರೈತರ ಬೆಳವಣಿಗೆ ಜೊತೆಗೆ ಸಣ್ಣಪುಟ್ಟ ಉದ್ಯಮಿಗಳಿಗೆ ಸಕಾಲದಲ್ಲಿ ಸಾಲ ವಿತರಿಸಿ ಅನುಕೂಲ ಕಲ್ಪಿಸಿದೆ. ಠೇವುದಾರರ ನಂಬಿಕೆ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರ ಬ್ಯಾಂಕ್ ಪ್ರಗತಿಗೆ ಕಾರಣವಾಗಿದೆ. ಸದ್ಯ ಬ್ಯಾಂಕ್ 25 ಸಾವಿರದಿಂದ 50 ಲಕ್ಷ ರೂ. ವರೆಗೆ ಸಾಲ ವಿತರಣೆ ಮಾಡುತ್ತಿದೆ ಎಂದರು.

ಬ್ಯಾಂಕ್ ಪ್ರಭಾರಿ ವ್ಯವಸ್ಥಾಪಕ ರವೀಂದ್ರ ಕ್ಯಾದಿಗ್ಗೆರಿ ವರದಿ ವಾಚಿಸಿ ಮಾತನಾಡಿ, ಆಡಳಿತ ಮಂಡಳಿ ಮಾರ್ಗದರ್ಶನ, ಸಿಬ್ಬಂದಿ ಸಹಕಾರದಿಂದ ಪ್ರತಿವರ್ಷ ಬ್ಯಾಂಕ್ ಪಗ್ರತಿಯತ್ತ ಹೆಜ್ಜೆ ಹಾಕಿದೆ. ಬ್ಯಾಂಕ್ 118.96 ಲಕ್ಷ ರೂ. ಷೇರು ಬಂಡವಾಳ, 255.42 ಲಕ್ಷ ರೂ. ನಿಧಿಗಳು, 3025.15 ಲಕ್ಷ ರೂ. ಠೇವುಗಳು, 1737.15 ಲಕ್ಷ ರೂ. ಸಾಲ ಮುಂಗಡಗಳು, 1198.55 ಲಕ್ಷ ರೂ. ಗುಂತಾವಣಿಗಳು, 3544.64 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದ್ದು ಸದರಿ ಸಾಲಿನಲ್ಲಿ ಬ್ಯಾಂಕ್ 23.18 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ನೀಡಲಾಗಿದೆ ಎಂದರು.

ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಮುಚ್ಚಂಡಿ, ವೃತ್ತಿಪರ ನಿರ್ದೇಶಕರಾದ ಎಂ.ಎನ್.ತಪಶೆಟ್ಟಿ, ಎಂ.ಎಸ್.ಬ್ಯಾಡಗಿ, ನಿರ್ದೇಶಕರಾದ ಎಸ್.ಜಿ.ಕುಮುಟಗಿ, ಎಂ.ಕೆ.ಚನ್ನಿಗಾವಿ, ಎಸ್.ಬಿ.ಹಿರೇಮಠ, ಜಿ.ಆರ್.ಯಂಡಿಗೇರಿ, ಆರ್.ಬಿ.ಪೂಜಾರಿ, ಎಸ್.ಎಸ್. ಹುಕುಮನಾಳ, ಡಾ.ಅನುಪ್ ನಾಗಠಾಣ, ಸಿ.ಡಿ.ವಿಭೂತಿ, ಎಚ್.ಪಿ.ತಳವಾರ, ಎ.ಎಂ.ಮಮದಾಪುರ, ಐ.ಎಸ್.ಹೊಸಮನಿ ಇತರರಿದ್ದರು.

ಗ್ರಾಹಕರ ಹಿತ, ತ್ವರಿತ ಸಾಲ ಹಾಗೂ ಠೇವುದಾರರ ನಂಬಿಕೆ ಪಡೆದು ಮುನ್ನಡೆದಾಗ ಬ್ಯಾಂಕ್ ಪ್ರಗತಿಯತ್ತ ಸಾಗುತ್ತದೆ. ಗ್ರಾಮೀಣ ಭಾಗದಲ್ಲಿ ಜನ್ಮತಳೆದ ಸ್ವಾಮಿ ವಿವೇಕಾನಂದ ಬ್ಯಾಂಕ್ ಠೇವುದಾರರು, ಗ್ರಾಹಕರು ಹಾಗೂ ನಿರ್ದೇಶಕ ಮಂಡಳಿ, ಸಿಬ್ಬಂದಿ ಸಹಕಾರದಿಂದ ಬೆಳೆಯುತ್ತ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಸಿದ್ಧಣ್ಣ ನಾಗಠಾಣ, ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್ ಅಧ್ಯಕ್ಷ

ನಿವೃತ್ತ ಸೈನಿಕನಾದ ನಾನು ಕಳೆದ 25 ವರ್ಷದಿಂದ ವ್ಯವಹಾರ ಮಾಡುತ್ತಿದ್ದೇನೆ. ಠೇವಿನ ಹಣಕ್ಕೆ ಹಾಗೂ ಪಡೆಯುವ ಸಾಲಕ್ಕೆ ಯಾವುದೇ ತೊಂದರೆಯಾಗಿಲ್ಲ. ಗ್ರಾಮೀಣ ಭಾಗದಲ್ಲಿ ಸ್ಥಾಪಿತಗೊಂಡ ಬ್ಯಾಂಕ್ ಆಡಳಿತ ಮಂಡಳಿ, ಗ್ರಾಹಕರ ನಂಬಿಕೆ, ಸಿಬ್ಬಂದಿ ಕಾರ್ಯದಿಂದ ಹೆಮ್ಮರವಾಗಿ ಬೆಳೆಯುತ್ತಿದೆ.

ಭೀಮಣ್ಣ ವಿಭೂತಿ, ನಿವೃತ್ತ ಸೈನಿಕ, ನಿಡಗುಂದಿ