ಜಿಲ್ಲೆ

ಪ್ರೀತಿ ಪ್ರೇಮ ಹಂಚುವುದೇ ನಿಜ ಪೂಜೆ,  ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು,  ಹುಬ್ಬಳ್ಳಿಯಲ್ಲಿ ವಿಶ್ವವೇದಾಂತ ಪರಿಷತ್ ಉದ್ಘಾಟನೆ

Dharwada - Basavaraj Idli

ಹುಬ್ಬಳ್ಳಿ: ದೇವರು ಸರ್ವವ್ಯಾಪಿ, ಆತ ಎಲ್ಲರೊಳಗೂ ಇದ್ದಾನೆ. ಹಾಗಾಗಿ ಯಾರಿಗೇ ದ್ರೋಹ ಬಗೆದರೂ ಅದು ದೇವರಿಗೆ ದ್ರೋಹ ಮಾಡಿದಂತೆ. ಸಂಸ್ಕಾರ, ಪ್ರೀತಿ, ಪ್ರೇಮದಿಂದ ಇದ್ದರೆ ಎಲ್ಲರೂ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಪ್ರತಿಪಾದಿಸಿದರು.

ಇಲ್ಲಿಯ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರೀಸಿದ್ಧಾರೂಢರ 190ನೇ ಜಯಂತ್ಯುತ್ಸವ ಹಾಗೂ ಶ್ರೀ ಗುರುನಾಥರೂಢರ 115ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ಹಾಗೂ 2025ನೇ ಸಾಲಿನ ಶಿವರಾತ್ರಿ ಮಹೋತ್ಸವ ನಿಮಿತ್ತ ವಿಶ್ವಶಾಂತಿಗಾಗಿ ಏರ್ಪಡಿಸಿದ್ದ ವಿಶ್ವವೇದಾಂತ ಪರಿಷತ್ ಸಮಾರಂಭದಲ್ಲಿ ಅವರು ಸಂಭವಾಮಿ ಯುಗೇ ಯುಗೇ ಕುರಿತು ಮಾತನಾಡಿದರು.

ಗುಡಿಯಲ್ಲಿ ಮಾತ್ರ ದೇವರಿಲ್ಲ, ಅಲ್ಲಿ ಮಾತ್ರ ಪೂಜೆ ಮಾಡಿದರೆ ಸಾಲದು, ನಿಜವಾದ ಪೂಜೆ ಪ್ರೀತಿ, ಪ್ರೇಮ ಹಂಚುವುದರಲ್ಲಿದೆ, ಸಂಸ್ಕಾರವಂತರಾಗಿ ಬಾಳುವುದರಲ್ಲಿದೆ. ಸಾಮಾಜಿಕ, ಧಾರ್ಮಿಕ ಬದುಕು ಬೇರೆಬೇರೆ ಅಲ್ಲ, ಸರ್ಕಾರಿ ಕೆಲಸ, ವೈದ್ಯಕಿಯ, ವೈದಿಕ ಕೆಲಸ ಏನೇ ಇದ್ದರೂ ಎಲ್ಲವೂ ದೇವರಿಗೆ ಸಲ್ಲುತ್ತದೆ. ವಿಶ್ವದ ಎಲ್ಲಿಯೇ ಮಾನವ ಕುಲಕ್ಕೆ ತೊಂದರೆಯಾದಾಗ ತಾನೇ ಹೇಳಿದಂತೆ ಪರಮಾತ್ಮನು ಸಾಧು ಸಜ್ಜನರ ರೂಪದಲ್ಲಿ ಅವತರಿಸಿ ಬರುತ್ತಾನೆ, ವಿಭೂತಿ ಪುರುಷರಲ್ಲಿ ಸನ್ನಿಹಿತನಾಗಿರುತ್ತಾನೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮನುಷ್ಯ ಹಾಗೂ ದೇವರಲ್ಲಿ ಯಾವುದೇ ಭಿನ್ನತೆ ಇಲ್ಲ, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದೇ ಅದ್ವೈತ ಸಿದ್ಧಾಂತ, ಮಾನವ ಧರ್ಮ ಒಬ್ಬರು ಇನ್ನೊಬ್ಬರು ಗೌರವಿಸುವುದನ್ನು ಹೇಳಿಕೊಡುತ್ತದೆ. ಸುಳ್ಳು ಹೇಳಬೇಡ, ಅಧರ್ಮ ಮಾಡಬೇಡ ಅದರಿಂದ ಶಿಕ್ಷೆಯಾಗುತ್ತದೆ ಎಂದು ಲೌಕಿಕ ಧರ್ಮಗಳು ಹೇಳಿದರೆ, ಧರ್ಮದಿಂದ ನಡೆ, ಸತ್ಯ ಮಾರ್ಗದಲ್ಲಿ ಹೋಗು ಅದರಿಂದ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮಾನವ ಧರ್ಮ ಹೇಳುತ್ತದೆ. ಇದನ್ನೆ ಶ್ರೀ ಸಿದ್ಧಾರೂಢರು ಅದ್ವೈತದ ಮೂಲಕ ಹೇಳಿದ್ದಾರೆ. ಅದನ್ನು ಅಭ್ಯಾಸ ಮಾಡಿದರೆ ಬದುಕು ಸರಳವಾಗುತ್ತದೆ ಎಂದರು.

ಸಂಭವಾಮಿ ಯುಗೇ ಯುಗೇ ವಿಷಯ ಕುರಿತು ಏರ್ಪಡಿಸಿದ್ದ ವೇದಾಂತ ಪರಿಷತ್ ನಲ್ಲಿ ಹಲವು ಸ್ವಾಮೀಜಿಗಳು ವಿಷಯ ವಿಶ್ಲೇಷಣೆ ಮಾಡಿದರು.

ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಂದ್ರೂಪ ರಾಮಚಂದ್ರಣ್ಣ ಮೇತ್ರಿ, ದೇವರಹುಬ್ಬಳ್ಳಿಯ ಶ್ರೀ ಸಿದ್ಧಶಿವಯೋಗಿಗಳು, ಬೆಂಗಳೂರು ಗಾಂಧಿ ಭವನ ಅಧ್ಯಕ್ಷ ವೊಡೆಪಿ ಕೃಷ್ಣ, ಕಲಬುಗಿರ್ಯ ಶ್ರೀ ಲಕ್ಷ್ಮೀದೇವಿ ತಾಯಿ, ಇತರರು ಆಶೀರ್ವಚನ ನೀಡಿದರು.

ಶ್ರೀಸಿದ್ಧಾರೂಢ ಕಥಾಮೃತ ಕನ್ನಡ, ಮರಾಠಿ, ಇಂಗ್ಲಿಷ, ಹಿಂದಿ ಗ್ರಂಥ ಸೇರಿ ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಟ್ರಸ್ಟಿ ಶ್ಯಾಮಾನಂದ ಪೂಜೇರಿ ಸ್ವಾಗತಿಸಿದರು.

ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಬೀದರ ಚಿದಂಬರಾಶ್ರಮದ ಡಾ. ಶಿವಕುಮಾರ ಸ್ವಾಮೀಜಿ, ಶ್ರೀ ಸಹಜಾನಂದ ಸ್ವಾಮೀಜಿ, ಅಭಿನವ ಸಿದ್ಧಾರೂಢ ಸ್ವಾಮೀಜಿ, ಟ್ರಸ್ಟ್ ಕಮೀಟಿ ಮುಖ್ಯ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ, ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್ಲ, ಡಾ. ವಿ.ಎಸ್.ವಿ. ಪ್ರಸಾದ, ಮಹೇಂದ್ರ ಸಿಂಘಿ, ಬಾಳು ಮಗಜಿಕೊಂಡಿ, ಇತರರು ಪಾಲ್ಗೊಂಡಿದ್ದರು.