ಜಿಲ್ಲೆ

ರಾಣೆಬೆನ್ನೂರಿಗೆ ಸಿದ್ದರಾಮಯ್ಯ 11ರಂದು

ರಾಣಿಬೆನ್ನೂರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.11ರಂದು ನಗರಕ್ಕೆ ಆಗಮಿಸಲಿದ್ದು, ಅಂದು ಬಹಿರಂಗ ಸಮಾವೇಶದಲ್ಲಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.
ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲಗೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲಾಗುವುದು. ನಂತರ ಮೆರವಣಿಗೆ ಮೂಲಕ ಹೊರಗುಡಿ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವರು. ಅಲ್ಲಿಂದ ಬೈಕ್ ರ‌್ಯಾಲಿ ಮೂಲಕ ಅವರನ್ನು ನಗರಸಭೆ ಕ್ರೀಡಾಂಗಣಕ್ಕೆ ಕರೆತರಲಾಗುವುದು. ಬಳಿಕ ಬಹಿರಂಗ ಸಭೆ ಉದ್ದೇಶಿಸಿ ಸಿದ್ದರಾಮಯ್ಯ ಭಾಷಣ ಮಾಡುವರು ಎಂದರು.
ಶಹರ ಘಟಕದ ಶೇರುಖಾನ್ ಕಾಬೂಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಜಾತಿ, ಆದಾಯ ಪರಿಗಣಿಸದೇ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಹಾಗೂ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿಯೊಂದು ಕುಟುಂಬದ ಮಹಿಳೆಗೆ 2 ಸಾವಿರ ರೂ. ನಗದು ನೀಡುವ ಗ್ಯಾರಂಟಿ ಕಾರ್ಡ್‌ಗಳನ್ನು ಇಂದಿನಿಂದ ಮನೆ ಮನೆಗೆ ತೆರಳಿ ಕುಟುಂಬ ಮಹಿಳೆಗೆ ಆಥವಾ ಮನೆಯ ಮುಖ್ಯಸ್ಥರಿಗೆ ವಿತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ ಕೋಳಿವಾಡ, ಜಟ್ಟೆಪ್ಪ ಕರೇಗೌಡ್ರ, ಡಾ.ಪ್ರವೀಣ ಖನ್ನೂರ, ರಾಜು ಮಾದಮ್ಮನವರ, ಶೇಖಪ್ಪ ಹೊಸಗೌಡ್ರ, ಬಸವರಾಜ ಹುಚ್ಚಗೊಂಡರ, ನಾಗರಾಜ ಮಾಕನೂರ, ಸುರೇಶ ಜಡಮಲಿ, ಅಶೋಕ ಗಂಗನಗೌಡ್ರ, ಶಿವಾನಂದ ಕನ್ನಪ್ಪಳ್ಳನವರ, ರಮೇಶ ಬಿಸಲಹಳ್ಳಿ, ಇತರರಿದ್ದರು.