ಸಿದ್ಧರಾಮಪ್ಪ ಉಪ್ಪಿನ, ಉಪಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ  
ಜಿಲ್ಲೆ

ಹೊಸದಾಗಿ ಜಾತಿ ಸಮೀಕ್ಷೆ, ಅಖಿಲ ಭಾರತ ವೀರಶೈವ ಮಹಾಸಭಾ ಹೋರಾಟಕ್ಕೆ ಸಂದ ಜಯ ಎಂದ ಸಿದ್ದರಾಮಪ್ಪ ಉಪ್ಪಿನ

ವಿಜಯಪುರ: ರಾಜ್ಯದಲ್ಲಿ ಹೊಸದಾಗಿ ಜಾತಿ ಸಮೀಕ್ಷೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರುವುದು ಅಖಿಲ ಭಾರತ ವೀರಶೈವ ಮಹಾ ಸಭಾದ ಹೋರಾಟಕ್ಕೆ ಸಂದ ಜಯ ಎಂದು ಮಹಾಸಭಾದ ಉಪಾಧ್ಯಕ್ಷ ಸಿದ್ಧರಾಮಪ್ಪ ಉಪ್ಪಿನ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ(ಜಾತಿಗಣತಿ) ಆರಂಭದಿಂದಲೇ ಸಮೀಕ್ಷೆಯು ಸಮಗ್ರವಾಗಿಲ್ಲ, ವೈಜ್ಞಾನಿಕವಾಗಿಲ್ಲ ಹಾಗೂ ಪಾರದರ್ಶಕವಾಗಿಲ್ಲವೆಂದು ಆಧಾರಗಳ ಸಹಿತ ಮಹಾಸಭೆಯು ಪ್ರತಿಭಟಿಸುತ್ತಲೇ ಬಂದಿತ್ತು. ಜಾತಿಗಣತಿಗೆ ಮಹಾಸಭೆಯ ವಿರೋಧವಿಲ್ಲ. ಆದರೆ ವೈಜ್ಞಾನಿಕವಾಗಿ, ಸಮಗ್ರವಾಗಿ, ಆಧಾರ್ ಜೋಡಣೆ, ಎಐ ತಂತ್ರಜ್ಞಾನ ಸೇರಿದಂತೆ ಅತ್ಯಾಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಮರು ಸಮೀಕ್ಷೆ(ಜಾತಿಗಣತಿ) ನಡೆಸುವಂತೆ ಮಹಾಸಭೆಯು ರಾಜ್ಯ ಸರ್ಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳಿಗೆ ಮನವಿ ಮಾಡುತ್ತಲೇ ಬಂದಿದೆ.

ಮಹಾಸಭೆಯ ನಿರಂತರ ಹೋರಾಟದ ಫಲವಾಗಿ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ ಹಾಗೂ ಇನ್ನಿತರೆ ನಾಯಕರುಗಳು ರಾಜ್ಯದಲ್ಲಿ ಮರು ಸಮೀಕ್ಷೆ (ಜಾತಿಗಣತಿ) ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವುದನ್ನು ಮಹಾಸಭೆಯು ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಆಗಿರುವ ಲೋಪ-ದೋಷಗಳನ್ನು ಸರಿಪಡಿಸಿಕೊಂಡು ಎಲ್ಲರ ಸಹಕಾರದೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸರ್ವರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ರಾಜ್ಯ ಸರ್ಕಾರ ಗಣತಿಯನ್ನು ನಡೆಸಿದಲ್ಲಿ ಮಹಾಸಭೆಯ ಸಂಪೂರ್ಣ ಸಹಕಾರವಿರುತ್ತದೆಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.