ಜಿಲ್ಲೆ

ಸಿದ್ದರಾಮೋತ್ಸವಕ್ಕೆ ನಾಲ್ಕು ಸಾವಿರ ಜನ: ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಮಾಹಿತಿ

ಕನಕಗಿರಿ: ದಾವಣಗೆರೆಯಲ್ಲಿ ಆ.3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವಕ್ಕೆ ಕ್ಷೇತ್ರದಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಮಠ ಹೇಳಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸಿದ್ದರಾಮೋತ್ಸವ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಪ್ರಚಾರ ಪಡಿಸಿ ಆಹ್ವಾನಿಸಿದ್ದೇವೆ. ಗ್ರಾಪಂಗೆ ಒಂದರಂತೆ ಬಸ್ ವ್ಯವಸ್ಥೆ ಮಾಡಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಬಸ್ ಬಿಡಲಾಗಿದೆ. ಕಾರ್ಯಕ್ರಮಕ್ಕೆ ತೆರಳಲು ಇರುವ ಬಸ್‌ಗಳಲ್ಲಿ ಕಾರ್ಯಕರ್ತರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಮುಖಂಡರಿಗೆ ತಿಳಿಸಲಾಗಿದೆ. ಸ್ವಂತ ಖರ್ಚಿನಲ್ಲಿ ಕ್ಷೇತ್ರದ ಮುಖಂಡರು ತೆರಳಲಿದ್ದಾರೆ ಎಂದರು. ಸಿದ್ದರಾಮೋತ್ಸವ ಮಾದರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಜನ್ಮದಿನ ಆಚರಿಸುತ್ತೀರಾ ಎಂಬ ಪ್ರಶ್ನೆಗೆ ರಾಜ್ಯ ಸಮಿತಿ ನಿರ್ಧರಿಸಲಿದೆ ಎಂದರು. ಮಾಧ್ಯಮ ವಕ್ತಾರ ಶರಣ ಬಸಪ್ಪ ಭತ್ತದ, ಪ್ರಮುಖರಾದ ಬಸವಂತಗೌಡ, ಅನಿಲ್ ಬಿಜ್ಜಳ, ಶರಣೇಗೌಡ, ರವಿ ಪಾಟೀಲ್, ಬಸಪ್ಪ ಇತರರಿದ್ದರು.

ತಬ್ಬಿಬ್ಬಾದ ಸಿದ್ದಪ್ಪ: ಕಾಂಗ್ರೆಸ್ ಮುಖಂಡ ಹಾಗೂ ಕುರುಬ ಸಮುದಾಯದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ ಮಾತನಾಡುವಾಗ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದು ಸಿದ್ದರಾಮಯ್ಯ ಸಿಎಂ ಹಾಗೂ ಕನಕಗಿರಿಯಲ್ಲಿ ಶಿವರಾಜ ತಂಗಡಗಿ ಶಾಸಕರಾಗುವುದು ನಿಶ್ಚಿತ ಎಂದರು. ನಂತರ ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾದ ಅವರು, ಸ್ಪಷ್ಟ ಬಹುಮತ ಪಡೆದರೆ ಹೈಕಮಾಂಡ್ ನಿರ್ಧಾರದ ಮೇಲೆ ಡಿಕೆಶಿ, ಖರ್ಗೆ, ಸತೀಶ್ ಜಾರಕಿಹೊಳಿ ಯಾರಾದರೂ ಸಿಎಂ ಆಗಬಹುದೆಂದು ಉಲ್ಟಾ ಹೊಡೆದರು.

ತಂಗಡಗಿ ಫೋಟೊ ಬಿಟ್ಟಿದ್ದು ಖಂಡನೀಯ
ಸಿದ್ದರಾಮೋತ್ಸವಕ್ಕಾಗಿ ಕೊಪ್ಪಳ ಶಾಸಕರು ಮುದ್ರಿಸಿದ್ದ ಪ್ರಚಾರ ಪತ್ರಗಳಲ್ಲಿ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಫೋಟೊ ಬಿಟ್ಟಿರುವುದು ಖಂಡನೀಯ. ಅವರು ಕ್ಷೇತ್ರಕ್ಕೆ ಬಂದಾಗ ಕೇಳುತ್ತೇವೆ. ಏನು ಉತ್ತರ ಕೊಡುತ್ತಾರೋ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗಂಗಾಧರಸ್ವಾಮಿ ಕಲುಬಾಗಿಲಮಠ ತಿಳಿಸಿದರು.