ಉಡುಪಿ: ಲವ್‌ಜಿಹಾದ್ ವಿಚಾರವಾಗಿ ಸಿದ್ದರಾಮಯ್ಯ ಇನ್ನೂ ಮೊಘಲ್ ಕಾಲದಲ್ಲೆ ಇದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್‌ಜಿಹಾದ್ ವಿರುದ್ಧ ಕಾನೂನು ತರಲು ಸಿಎಂ ಒಪ್ಪಿಗೆ ಇದೆ. ಸಿದ್ದರಾಮಯ್ಯ ಮೊಘಲ್ ಕಾಲದಿಂದಲೂ ಲವ್‌ಜಿಹಾದ್ ಇದೆ ಎಂದಿದ್ದಾರೆ, ಅವರಿನ್ನೂ ಮೊಘಲ್ ಕಾಲದಲ್ಲಿಯೇ ಇದ್ದಾರೆ.
ಲವ್‌ಜಿಹಾದ್ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ಹರಿಯಾಣ, ಮಧ್ಯಪ್ರದೇಶ ಸರ್ಕಾರ, ಉತ್ತರ ಪ್ರದೇಶ ಸರ್ಕಾರಗಳು ಕಾನೂನು ರೂಪಿಸಲು ನಿರ್ಧರಿಸಿವೆೆ. ಉತ್ತರ ಪ್ರದೇಶ ಸರ್ಕಾರ ಕಾನೂನು ಜಾರಿಗೊಳಿಸಿದೆ. ಅದನ್ನು ಯಾವ ರೀತಿ ಮಾಡಬೇಕು. ಅದರಲ್ಲಿ ಯಾವುದೆಲ್ಲ ಅಂಶ ಸೇರಿಸಬೇಕು ಎಂಬುವುದರ ಬಗ್ಗೆ ತೀರ್ಮಾನ ಮಾಡುತ್ತಿದ್ದೇವೆ. ಉ.ಪ್ರ. ಸರ್ಕಾರ ಜಾರಿಗೊಳಿಸಿರುವ ಕಾನೂನಿನ ಪ್ರತಿಯನ್ನು ತರಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಹಾಗೆ ಬೇರೆ ರಾಜ್ಯಗಳ ಕಾನೂನು ಯಾವ ರೀತಿ ಇದೆ ಎನ್ನುವುದನ್ನು ತಿಳಿದುಕೊಳ್ಳಲಾಗುವುದು. ಕರ್ನಾಟಕದಲ್ಲಿ ಲವ್‌ಜಿಹಾದ್ ತಡೆಗೆ ಆದಷ್ಟು ಬೇಗ ಕಾನೂನು ತರಲಾಗುತ್ತದೆ ಎಂದರು.