ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಹಣಕಾಸು ಸಚಿವರೂ ಆಗಿರುವ ಅವರು 15ನೇ ಬಾರಿಗೆ ಬಜೆಟ್ ಮಂಡಿಸಲು ಸನ್ನದ್ಧವಾಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಜಿಲ್ಲೆಗೆ ಭರಪೂರ ಕೊಡುಗೆಸಿಗಬಹುದೆಂಬ ನಿರೀಕ್ಷೆಯೂ ಹೆಚ್ಚಿದೆ.
ದಸರಾ ಪ್ರಾಧಿಕಾರ, ಚಿತ್ರನಗರಿ, ಇಂಡಸ್ಟ್ರಿಯಲ್ ಕಾರಿಡಾರ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಸೇರಿದಂತೆ ಹತ್ತಾರು ನಿರೀಕ್ಷೆಗಳು ಈಡೇರಲಿವೆಯೇ ಎಂಬುದನ್ನು ಕಾದುನೋಡಬೇಕಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಯೋಜನೆ ಮತ್ತು ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ಈ ಹಿಂದೆ ತಮ್ಮದೇ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸಿದ್ದರಾಮಯ್ಯ ಘೋಷಿಸಿದ್ದರು. ಬಳಿಕ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯೋಜನೆಗಳು ದೊರೆಯಲಿಲ್ಲ. ಸದ್ಯಕ್ಕೆ ಜಿಲ್ಲೆಯವರೇ ಮುಖ್ಯಮಂತ್ರಿಯಾಗಿರುವುದರಿಂದ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ವ್ಯವಸ್ಥಿತವಾಗಿ ಆಚರಿಸಲು ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಕಳೆದ ಬಾರಿ ಮಧ್ಯಂತರ ಬಜೆಟ್ ಆಗಿದ್ದ ಕಾರಣ ಹೆಚ್ಚು ಯೋಜನೆ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ದಸರಾ ಪ್ರಾಧಿಕಾರದ ಕೂಗು ಜೋರಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಕೂಡ ಇತ್ತೀಚೆಗೆ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಒಂದು ವೇಳೆ ಪ್ರಾಧಿಕಾರ ರಚನೆಯಾದರೆ ನಾಡಹಬ್ಬ ದಸರಾವನ್ನು ವ್ಯವಸ್ಥಿತವಾಗಿ ಆಚರಿಸುವ ಜತೆಗೆ, ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಮೈಸೂರಿನ ಪ್ರವಾಸೋದ್ಯಮಕ್ಕೂ ಬೂಸ್ಟರ್ ನೀಡಿದಂತಾಗಲಿದೆ.
ಪಾರಂಪರಿಕ ನಗರಿ ಎಂದೇ ಕರೆಯಲ್ಪಡುವ ಮೈಸೂರಿನಲ್ಲಿ ಅಂಬಾವಿಲಾಸ ಅರಮನೆ, ಜಯಲಕ್ಷ್ಮೀ ವಿಲಾಸ ಅರಮನೆ, ದೇವರಾಜ ಮತ್ತು ಲ್ಯಾನ್ಸ್‌ಡೌನ್ ಕಟ್ಟಡ, ಹಳೆಯ ಡಿ.ಸಿ. ಕಚೇರಿ ಕಟ್ಟಡ, ದೊಡ್ಡ ಗಡಿಯಾರ, ಮಹಾರಾಣಿ ಮಹಿಳಾ ಕಾಲೇಜು, ಮಹಾರಾಜ ಕಾಲೇಜು ಕಟ್ಟಡ ಸೇರಿದಂತೆ ನೂರಾರು ಪಾರಂಪರಿಕ ಕಟ್ಟಡಗಳು ಇದ್ದು, ಸೂಕ್ತ ನಿರ್ವಹಣೆ ಮತ್ತು ಅನುದಾನದ ಕೊರತೆಯಿಂದ ಒಂದರ ಮೇಲೆ ಒಂದರಂತೆ ಕುಸಿದು ಬೀಳುತ್ತಿವೆ. ಮೈಸೂರಿನ ಅಸ್ಮಿತೆಯಾಗಿರುವ ಈ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ತನ್ನ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕಿದೆ. ಇದರಿಂದ ಮುಂದಿನ ತಲೆಮಾರಿಗೂ ಕಟ್ಟಡಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಲಿದೆ.
ಮುಖ್ಯಂತ್ರಿ ಪ್ರತಿನಿಧಿಸುವ ಮೈಸೂರು ತಾಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿನ ಹಿಮ್ಮಾವು ಬಳಿ ಫಿಲ್ಮ್‌ಸಿಟಿ ನಿರ್ಮಾಣ ಸಂಬಂಧ ಹಗ್ಗಜಗ್ಗಾಟ ನಡೆಯುತ್ತಲೇ ಇದ್ದು, ಉದ್ದೇಶಿತ ಜಾಗದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅನುದಾನ ಘೋಷಣೆ ಮಾಡುವ ಸಾಧ್ಯತೆಗಳು ಇವೆ. ಇದರ ಜತೆಗೆ, ವರುಣ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ಅನುದಾನ ಪ್ರಕಟಿಸುವ ನಿರೀಕ್ಷೆ ಇದೆ. ಒಂದು ವೇಳೆ ಉದ್ದೇಶಿತ ಜಾಗದಲ್ಲಿ ಫಿಲ್ಮ್‌ಸಿಟಿ ನಿರ್ಮಾಣವಾದರೆ ಮೈಸೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮವೂ ಅಭಿವೃದ್ಧಿ ಆಗಲಿದೆ. ಜತೆಗೆ, ಮೈಸೂರು-ನಂಜನಗೂಡಿನ ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಉದ್ಯಮ ಗರಿಗೆದರಲಿದೆ.
ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಮುಂದಿನ 30-50 ವರ್ಷಗಳ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಲು ಮಂತ್ತೊಂದು ಸುತ್ತಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಬೇಕಿದೆ. ಅದಕ್ಕಾಗಿ ಅಗತ್ಯ ಭೂಮಿಯ ಸ್ವಾಧೀನಕ್ಕಾಗಿ ಅನುದಾನ ಘೋಷಣೆ ಮಾಡುವುದು ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಕೊಡುತ್ತಿರುವ 150 ಕೋಟಿ ರೂ. ಅನುದಾನದ ಬದಲಿಗೆ ಈ ಬಾರಿ 300 ಕೋಟಿ ರೂ. ಅನುದಾನ ಮೀಸಲಿಡುವ ನಿರೀಕ್ಷೆ ಇದೆ.
ಬಜೆಟ್‌ನಲ್ಲಿ ಕೈಗಾರಿಕೆಗಳ ಬೇಡಿಕೆಗೂ ಸ್ಪಂದಿಸಬೇಕಿದೆ. ಕೈಗಾರಿಕೆಗಳ ಉತ್ತೇಜನಕ್ಕಾಗಿ ಮಲ್ಟಿ ಸ್ಟೋರ್ ಪಾರ್ಕಿಂಗ್ ಮಾಡುವುದು, ಮೈಸೂರು-ಮಂಗಳೂರು ನಡುವೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡುವ ಅಗತ್ಯವಿದೆ. ಅದಕ್ಕಾಗಿ ವಿಶೇಷ ಅನುದಾನ ಅಗತ್ಯವಿದೆ. ಜತೆಗೆ, ಕಬಿನಿ ಜಲಾಶಯದಲ್ಲಿ ಬೃಂದಾವನ ಗಾರ್ಡ್‌ನ್ ಮಾದರಿಯಲ್ಲಿ ಉದ್ಯಾನ ನಿರ್ಮಾಣ, ತಲಕಾಡು ಪ್ರದೇಶವನ್ನು ಯತ್ರಾಸ್ಥಳವಾಗಿ ಪರಿವರ್ತಿಸುವುದು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಚಾಮುಂಡಿ ಬೆಟ್ಟವನ್ನು ನೈಸರ್ಗಿಕವಾಗಿಯೇ ಕಾಪಾಡಿಕೊಂಡು ಪರಿಸರಸ್ನೇಹಿಯಾಗಿ ಯೋಜನೆ ರೂಪಿಸುವುದು, ವಿದ್ಯಾರಣ್ಯಪುರಂನಲ್ಲಿರುವ ಸೀವೇಜ್ ಫಾರ್ಮ್‌ನಲ್ಲಿ ಸಂಗ್ರವಾಗಿರುವ ತ್ಯಾಜ್ಯವನ್ನು ವೈಜ್ಞಾನಿಕ ವಿಲೇವಾರಿಗೆ ಅನುದಾನ ಮೀಸಲಿಡುವ ಸಾಧ್ಯತೆಗಳಿವೆ.
ಸಾಂಸ್ಕೃತಿಕ ನಗರಿ ಮೈಸೂರಿನ ಅನೇಕ ಪಾರಂಪರಿಕ ಕಟ್ಟಡಗಳು ಹಾಳಾಗಿವೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಿಜೆಪಿ ಸರ್ಕಾರದಲ್ಲಿ ಅನುದಾನ ನೀಡುವುದಾಗಿ ಘೋಷಣೆಯೂ ಆಗಿತ್ತು. ಬಳಿಕ ಸರ್ಕಾರ ಬದಲಾಯಿತು. ಈ ಬಾರಿಯಾದರೂ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಹಾಗೂ ಮೈಸೂರು ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಮತ್ತು ಯೋಜನೆಗಳನ್ನು ಘೋಷಿಸಬೇಕು.ಶಿವಕುಮಾರ್ಮಾಜಿ ಮೇಯರ್ ಮೈಸೂರು ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪ್ರೇಕ್ಷಣೀಯ ತಾಣಗಳಿಗೆ ಮೂಲಸೌಕರ್ಯ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸಬೇಕು. ವಿಮಾನಯಾನ ಸೇವೆ ಸೌಲಭ್ಯ ವಿಸ್ತರಣೆ ಆಗಬೇಕು. ಮೈಸೂರಿನಿಂದ ಎಲ್ಲ ಕಡೆಗೆ ವಿಮಾನ ಸಂಪರ್ಕ ಕಲ್ಪಿಸಬೇಕು.ಸಿ.ನಾರಾಯಣಗೌಡಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ