ಜಿಲ್ಲೆ

ಸಿದ್ದರಾಮಯ್ಯ ಅಣತಿಯಂತೆ ನಡೆದ ಒಡೆದಾಳುವ ಗಣತಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಮನೆ ಮನೆಗೆ ತೆರಳಿ ಗಣತಿ ಮಾಡದೆ ಮನೆಯೊಳಗೆ ಕುಳಿತು ಸಮಾಜ ಒಡೆಯಲು ರೂಪಿಸಿದ ಕುತಂತ್ರದ ಕೂಸೇ ಈ ಸಿದ್ದರಾಮಯ್ಯನವರ ಸರ್ಕಾರ ನಡೆಸಿದ ಜಾತಿಗಣತಿ. ಇದು ಗಣತಿ ಅಲ್ಲ. ಕಾಂಗ್ರೆಸ್ಸಿನ ಓಲೈಕೆ ರಾಜಕಾರಣ ಟೂಲ್​ ಕಿಟ್​ ಅಷ್ಟೇ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ರಿಟಿಷರ ವಿಭಜಿಸಿ ಆಳುವ ನೀತಿಯನ್ನೇ ಮುಂದುವರಿಸಿರುವ ಕಾಂಗ್ರೆಸ್​, ಈಗಲೂ ಸಮುದಾಯಗಳಲ್ಲಿ ಬಿರುಕು ಮೂಡಿಸುವ ಕುತಂತ್ರದಲ್ಲಿ ತೊಡಗಿದೆ. ಮುಸ್ಲಿಂ ಮತ ಬ್ಯಾಂಕ್​ ಓಲೈಕೆಗಾಗಿ ಲಿಂಗಾಯತ ಸಮಾಜ ಒಡೆಯುವ ಹೊಸ ಯತ್ನವೇ ಈ ಜಾತಿ ಗಣತಿ ವರದಿ. 66.35 ಲಕ್ಷ ಲಿಂಗಾಯತರು ಹಾಗೂ 10.49 ಲಕ್ಷ ವೀರಶೈವ ಲಿಂಗಾಯತರನ್ನಾಗಿ ಪ್ರತ್ಯೇಕಿಸಿ ಬಣಜಿಗ, ಗಾಣಿಗ, ಸಾದರ, ಉಪ್ಪಾರ, ಕುಡು ಒಕ್ಕಲಿಗ, ಜಂಗಮ ಇತ್ಯಾದಿ ಉಪಪಂಗಡಗಳನ್ನು ವಿಭಜಿಸಿ, ಲಿಂಗಾಯತ ಸಮಾಜದ ಅಸ್ತಿತ್ವವನ್ನೇ ದುರ್ಬಲಗೊಳಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದು ಸಾಮಾಜಿಕ ನ್ಯಾಯ ಒದಗಿಸಲು, ನೀತಿ ರೂಪಿಸಲು ಮಾಡಿದ ಗಣತಿ ಅಲ್ಲ. ರಾಜಕೀಯ ಲಾಭಕ್ಕೆ ಕಾಂಗ್ರೆಸ್​ ಹೂಡಿರುವ ಕುತಂತ್ರದ ಮುಂದುವರೆದ ಭಾಗ. ಸಿದ್ದರಾಮಯ್ಯ ಕಳೆದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮಾಜ ಒಡೆಯಲು ಮಾಡಿದ ಯತ್ನ ವಿಫಲವಾದ್ದರಿಂದ ಈ ಬಾರಿ ಗಣತಿಯ ಹೆಸರಿನಲ್ಲಿ ಮತ್ತೊಮ್ಮೆ ಪ್ರಯತ್ನ ಮುಂದುವರೆಸಿದ್ದಾರೆ. ಇಂತಹ "ಅವೈಜ್ಞಾನಿಕ', "ಅಪಾರದರ್ಶಕ' ವರದಿ ಮೂಲಕ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹೊಸ ಅಸಮಾನತೆ ಸೃಷ್ಟಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ನಮ್ಮೆಲ್ಲರಿಗೂ ಎಚ್ಚರಿಕೆಯ ಘಂಟೆ ಎಂದು ಬೆಲ್ಲದ ತಿಳಿಸಿದ್ದಾರೆ.