ಜಿಲ್ಲೆ

ಸಿದ್ದರಾಮಯ್ಯ ಸ್ಪರ್ಧೆ ಚರ್ಚೆ ಬಲು ಜೋರು

reportermys

ಅವಿನಾಶ್ ಜೈನಹಳ್ಳಿ ಮೈಸೂರು
ಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡು 2008ರಲ್ಲಿ ಜನ್ಮ ತಾಳಿದ ವರುಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಕಣ ರಂಗೇರುತ್ತಿದ್ದು, ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್‌ಗಾಗಿ ಅನೇಕ ಆಕಾಂಕ್ಷಿಗಳು ಪ್ರಯತ್ನಿಸುತ್ತಿದ್ದಾರೆ.
ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಎರಡು ಬಾರಿ ಗೆದ್ದಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಗೆದ್ದಾಗ ವಿರೋಧ ಪಕ್ಷದ ನಾಯಕರಾದರೆ, 2013ರಲ್ಲಿ ಎರಡನೇ ಬಾರಿ ಜಯಗಳಿಸಿ ಮುಖ್ಯಮಂತ್ರಿಯಾಗಿದ್ದರು. 2018ರಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಈ ಕ್ಷೇತ್ರದಿಂದ ಗೆಲುವು ಸಾಧಿಸಿ ಸದ್ಯ ಶಾಸಕರಾಗಿದ್ದಾರೆ.


ಸಿದ್ದರಾಮಯ್ಯ ಸ್ಪರ್ಧಿಸುವಂತೆ ಒತ್ತಾಯ:
ಸಿದ್ದರಾಮಯ್ಯ ವರುಣದಿಂದಲೇ ಸ್ಪರ್ಧಿಸಬೇಕು ಎಂಬ ಒತ್ತಾಯ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲೂ ಹೆಚ್ಚಾಗಿದೆ. ಸಿದ್ದರಾಮಯ್ಯ ಸದ್ಯ ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದು, ಕೋಲಾರ, ಬಾದಾಮಿ, ವರುಣ ಪೈಕಿ ಒಂದರಲ್ಲಿ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಕೋಲಾರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಅಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರ ಮನಸ್ಥಿತಿ ತಿಳಿದು ಬಂದಿದ್ದಾರೆ. ಕೋಲಾರ ಕ್ಷೇತ್ರವೂ ಅವರಿಗೆ ಸೇಫ್ ಅಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.


ಈ ನಡುವೆ, ಮೈಸೂರು ಜಿಲ್ಲೆಯ ಅಭಿಮಾನಿಗಳು ತವರು ಕ್ಷೇತ್ರ ವರುಣದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜತೆಗೆ, ಕೋಲಾರದ ಭೇಟಿ ಬಳಿಕ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿರುವ ಸಿದ್ದರಾಮಯ್ಯ ಕೂಡ ವರುಣದಿಂದಲೇ ಸ್ಪರ್ಧಿಸಲು ಮನಸ್ಸು ಮಾಡುವ ಸಾಧ್ಯತೆ ಇದೆ. ಅಲ್ಲದೆ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಮುಜುಗರ ಅನುಭವಿಸಿರುವ ಕಾರಣ ವರುಣದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಚಿಂತನೆಯೂ ಅವರಲ್ಲಿ ಇದೆ ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಇತ್ತೀಚೆಗೆ ಮೈಸೂರಿಗೆ ಬಂದಾಗಲೆಲ್ಲ ವರುಣ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಗಳಲ್ಲಿಯೇ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರ ಜತೆ ಹೆಚ್ಚಾಗಿ ಸಂಪರ್ಕ ಬೆಳೆಸುತ್ತಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ವರುಣದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಮಾತ್ರ ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಆದರೆ, ಯತೀಂದ್ರ ಅವರನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳುಹಿಸಿ, ಸಿದ್ದರಾಮಯ್ಯ ಅವರೇ ವರುಣ ಅಭ್ಯರ್ಥಿಯಾಗಬೇಕು ಎನ್ನುವುದು ಸ್ಥಳೀಯ ಕಾಂಗ್ರೆಸ್ ನಾಯಕರ ಒತ್ತಾಯವಾಗಿದೆ. ಇನ್ನು ಸಿದ್ದರಾಮಯ್ಯ ಕೂಡ ವರುಣ ಕ್ಷೇತ್ರದ ಸುತ್ತಾಟ ನಡೆಸುತ್ತಿದ್ದು, ಕಳೆದ ಒಂದು ವಾರದಿಂದ ಹೆಚ್ಚಾಗಿ ವರುಣ ಕ್ಷೇತ್ರದ ಹಳ್ಳಿ-ಹಳ್ಳಿ ಸುತ್ತಾಡುತ್ತಿದ್ದಾರೆ.

ವರಿಷ್ಠರು ಬಯಸಿದರೆ ವಿಜಯೇಂದ್ರ ಸ್ಪರ್ಧೆ!
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾಗಿದೆ. ವಿಜಯೇಂದ್ರ ಇಲ್ಲಿಂದಲೇ ಸ್ಪರ್ಧಿಸಬೇಕು ಎಂಬ ಆಸೆ ಸ್ಥಳೀಯ ಕಾರ್ಯಕರ್ತರಲ್ಲಿದ್ದರೂ ಅವರು ಸ್ಪರ್ಧೆ ಮಾಡುವಂತಹ ಬೆಳವಣಿಗೆಗಳು ಕ್ಷೇತ್ರದಲ್ಲಿ ಇನ್ನೂ ಗೋಚರವಾಗಿಲ್ಲ. ಆದರೆ, ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಯಡಿಯೂರಪ್ಪ ಹೇಳುವ ಮೂಲಕ ವರುಣದಿಂದ ಸ್ಪರ್ಧಿಸುವ ಸಾಧ್ಯತೆಗಳ ಚರ್ಚೆಯನ್ನು ಕ್ಷೀಣವಾಗಿಸಿದ್ದಾರೆ.
2018ರ ಚುನಾವಣೆಯಲ್ಲಿ ವರುಣದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡಲು ಚಿಂತಿಸಿದ್ದರು. ಅಂತೆಯೆ, ಅಂದು ನಾಯಕತ್ವ ಕೊರತೆಯಿಂದಾಗಿ ಕ್ಷೇತ್ರದಲ್ಲಿ ಮೂರು ಭಾಗವಾಗಿದ್ದ ಬಿಜೆಪಿಯನ್ನು ಒಗ್ಗೂಡಿಸಿದ್ದರು. ಕ್ಷೇತ್ರದಾದ್ಯಂತ ತಿರುಗಾಡಿ ಮುಖಂಡರು, ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಅವರು, ಅಸಮಾಧಾನ ಮತ್ತು ಗೊಂದಲಗಳನ್ನು ದೂರ ಮಾಡಿ ಪಕ್ಷವನ್ನು ಒಗ್ಗೂಡಿಸಿದ್ದರು. ಆದರೆ, ಬಿಜೆಪಿ ವರಿಷ್ಠರು ಅಂತಿಮ ಘಳಿಗೆಯಲ್ಲಿ ತೋಟದಪ್ಪ ಬಸವರಾಜು ಅವರಿಗೆ ಟಿಕೆಟ್ ನೀಡಿದ್ದು ಇತಿಹಾಸ.
ಈಗಲೂ ಇಲ್ಲಿನ ಮುಖಂಡರ ಸಂಪರ್ಕದಲ್ಲಿ ವಿಜಯೇಂದ್ರ ಇದ್ದಾರೆ. ಕ್ಷೇತ್ರದ ಸಂಪೂರ್ಣ ನಾಡಿಮಿಡಿತ, ಮತದಾರರು, ಗ್ರಾಮಗಳ ಬಗ್ಗೆ ಬಲ್ಲವರಾಗಿದ್ದಾರೆ. ಒಂದು ವೇಳೆ ವರಿಷ್ಠರು ಸೂಚಿಸಿದರೆ ವಿಜಯೇಂದ್ರ ಬಿಜೆಪಿ ಅಭ್ಯರ್ಥಿಯಾದರೂ ಆಶ್ಚರ್ಯವಿಲ್ಲ. ಇನ್ನು ಭಾನುವಾರವಷ್ಟೇ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ, ವರುಣ ಕ್ಷೇತ್ರ ಹಾಗೂ ಕಾರ್ಯಕರ್ತರ ಜತೆಗಿನ ತಮ್ಮ ಸಂಬಂಧದ ಬಗ್ಗೆ ವಿಜಯೇಂದ್ರ ಹೇಳಿಕೊಂಡಿದ್ದಾರೆ. ವರಿಷ್ಠರು ಬಯಸಿದರೆ ವರುಣ ಕ್ಷೇತ್ರದಿಂದ ನಿಲ್ಲುವುದಾಗಿಯೂ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಇದ್ದಾರೆ ಅಪಾರ ಆಕಾಂಕ್ಷಿಗಳು:
ಬಿ.ವೈ.ವಿಜಯೇಂದ್ರ ಆಪ್ತ, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಆಕಾಂಕ್ಷಿಯಾಗಿದ್ದಾರೆ. ಇವರು ಮೈಸೂರು ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ.
ಇವರಲ್ಲದೆ, 2013ರಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಯಡಿಯೂರಪ್ಪ ಆಪ್ತ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಈ ಬಾರಿಯೂ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ.
ಇನ್ನು ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ ಹಾಗೂ 3ನೇ ಬಾರಿಗೆ ಜಿಲ್ಲಾ ಗ್ರಾಮಾಂತರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರತಾಪ್ ಜಿ.ದೇವನೂರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರು ಆರ್‌ಎಸ್‌ಎಸ್ ಮತ್ತು ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮೈಸೂರು ಜಿಲ್ಲಾ ಸಹಕಾರ ಯೂನಿಯನ್, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ, ಮೈಮುಲ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್.ಸದಾನಂದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲರಾಜಯ್ಯನಹುಂಡಿ ಗುರುಸ್ವಾಮಿ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಆಕಾಂಕ್ಷಿಗಳಾಗಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ದಿ ಅವರ ಪುತ್ರ ಶರತ್ ಪುಟ್ಟಬುದ್ದಿ ಕೂಡ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಇವರು, ಅಮೆರಿಕದ ಐಟಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ತವರಿಗೆ ಹಿಂದಿರುಗಿ ವರುಣ ಕ್ಷೇತ್ರದ ಬಿಜೆಪಿ ಸಂಘಟನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್‌ನಿಂದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿವೃತ್ತ ಪ್ರಾಧ್ಯಾಪಕ ಬೊಕ್ಕಳ್ಳಿ ಪುಟ್ಟಸುಬ್ಬಪ್ಪ ಅವರ ಪುತ್ರ ಅಭಿಷೇಕ್ ಹಾಗೂ ಅಹಿಂದ ಹೋರಾಟಗಾರ ಜವರಪ್ಪ ಆಕಾಂಕ್ಷಿಗಳಾಗಿದ್ದಾರೆ.