ಜಗಳೂರು: ಸಿದ್ದರಾಮಯ್ಯನವರು ಇಲ್ಲದ ಸದನ ದೇವರಿಲ್ಲದ ಗುಡಿ ಇದ್ದಂತೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಬಣ್ಣಿಸಿದರು.
ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಸಿಎಂ ಸಿದ್ದರಾಮಯ್ಯನವರ 76ನೇ ವಷರ್ದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ ವಷರ್ ಸಿದ್ದರಾಮಯ್ಯ ಅವರ ಜನ್ಮದಿನ ದಾವಣಗೆರೆಯಲ್ಲಿ ಆಚರಿಸಿದಾಗ ಸುಮಾರು 10 ಲಕ್ಷ ಜನ ಸೇರಿ ಆಶೀರ್ವಾದ ಮಾಡಿದ್ದರು. ಆಯವ್ಯಯ ಅಂದರೆ ಕಾಯಕ, ದಾಸೋಹ ಎನ್ನುವ ನಂಬಿಕೆಯಲ್ಲಿ 14 ಬಾರಿ ಬಜೆಟ್ ಮಂಡನೆ ಮಾಡಿ ಅವರು ಹೊಸ ಇತಿಹಾಸ ಸೃಷ್ಠಿ ಮಾಡಿದ್ದಾರೆ. ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ, ಗುರಿ ಇಲ್ಲದ ದಾರಿಯಲ್ಲಿ ನಡೆಯಲು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯನವರ ಮಾತಾಗಿದೆ. ಇಂತಹ ಮಹಾನ್ ನಾಯಕ ರಾಜ್ಯದಲ್ಲಿ ಹುಟ್ಟಿರುವುದು ದೀನ ದಲಿತರ ಸೌಭಾಗ್ಯ ಎಂದರು.
ತಾಲೂಕಿನ ನರೇನಹಳ್ಳಿ ಗ್ರಾಮದ ಸರ್ಕಾರಿ ಜಾಗದ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡ 12 ಕುಟುಂಬಗಳಿಗೆ ಸಿದ್ದರಾಮಯ್ಯ ಹುಟ್ಟುಹಬ್ಬದ ನಿಮಿತ್ತ ಹಕ್ಕುಪತ್ರಗಳನ್ನು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ವಿತರಿಸಿದರು.
ಇದೇ ವೇಳೆ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಶಾಸಕರ ನೇತೃತ್ವದಲ್ಲಿ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುರೇಶ್‌ಗೌಡ, ಪಪಂ ಸದಸ್ಯರಾದ ರಮೇಶ್‌ರೆಡ್ಡಿ, ರವಿಕುಮಾರ್, ಮಂಜುನಾಥ್, ಮಹಮದ್, ತಾನಾಜಿ ಗೋಸಾಯಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕೆಂಚೋಳ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಹಮದ್ ಅಲಿ, ಹಿರಿಯ ಮುಖಂಡರಾದ ಯರಬಳ್ಳಿ ಉಮಾಪತಿ, ಶಿವನಗೌಡ, ಸುಧೀರ್‌ರೆಡ್ಡಿ, ಗುರುಮೂರ್ತಿ, ನಜೀರ್ ಅಹಮದ್, ಬರ್ಕತ್ ಅಲಿ ಮತ್ತಿತರರಿದ್ದರು.