ಜಿಲ್ಲೆ

ಕೋವಿಡ್​-19 ವಿಚಾರದಲ್ಲೂ ಮಾಜಿ ಸಿಎಂ ಎಡವಟ್ಟು: ಕರೊನಾ ಎಣ್ಣೆ ಬ್ರ್ಯಾಂಡ್​ ಟ್ಯಾಗ್​ ಮಾಡಿ ಪೇಚಿಗೆ ಸಿಲುಕಿದ ಸಿದ್ದರಾಮಯ್ಯ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜಕೀಯ ಭಾಷಣ ಮಾಡುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಡವಟ್ಟು ಮಾಡಿಕೊಂಡಿದ್ದನ್ನು ಕೆಲವೊಮ್ಮೆ ನೋಡಿ ನಕ್ಕಿದ್ದೇವೆ. ಇದೀಗ ಅಂಥಹದ್ದೇ ಎಡವಟ್ಟನ್ನು ಕರೊನಾ ವೈರಸ್​ ವಿಚಾರದಲ್ಲೂ ಮಾಡಿಕೊಂಡಿದ್ದಾರೆ.

ಸದ್ಯ ಇಡೀ ಜಗತ್ತಿನಲ್ಲಿ ಕೇಳಿಬರುತ್ತಿರುವ ಒಂದೇ ಪದವೆಂದರೆ ಅದು ಕರೊನಾ ವೈರಸ್​. ಕಳೆದೆರಡು ತಿಂಗಳಿನಿಂದಲೂ ಟ್ವಿಟರ್​​ನಲ್ಲಿ ಕರೊನಾವೈರಸ್​ ಅಥವಾ ಕೋವಿಡ್​-19 ಪದವೇ ಟ್ರೆಂಡ್​ ಆಗಿರುವುದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚಾಗಿ ಈ ಹ್ಯಾಶ್​ಟ್ಯಾಗ್​ಗಳೇ ಓಡಾಡುತ್ತಿವೆ.

ಅಂದಹಾಗೆ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವಾಗ ಇನ್ನೊಬ್ಬರಿಗೆ ಟ್ಯಾಗ್​ ಮಾಡುವುದು ಸಾಮಾನ್ಯ. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕರೊನಾ ಕುರಿತು ಮಾಹಿತಿ ಹಂಚಿಕೊಳ್ಳುವಾಗ ಟ್ಯಾಗ್​ ಮಾಡಿದ ಪದವೇ ಇದೀಗ ನಗೆಪಾಟಲಿಗೆ ಗುರಿಯಾಗಿದೆ.

ತಮ್ಮ ಟ್ವಿಟರ್​ನಲ್ಲಿ ಸರಣಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ ಅವರು ಕರೊನಾ ತಡೆಗಟ್ಟುವಿಕೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಕೊರೊನಾ ಸೋಂಕಿತರ ವೈದ್ಯರ ಸುರಕ್ಷತಾ ಸಲಕರಣೆ (PPE), N95 ಮಾಸ್ಕ್‌ಗಳು ಮತ್ತು ರೋಗಿಗಳ ವೆಂಟಿಲೇಟರ್‌ಗಳನ್ನು ರಾಜ್ಯಗಳ ಬದಲಿಗೆ ತಾನೇ ಖರೀದಿಸಿ ಪೂರೈಸುವುದಾಗಿ ಸರ್ಕಾರದ ಆದೇಶ ನೀಡಿರುವುದು ಖಂಡನೀಯ. ರಾಜ್ಯಗಳ ಅಧಿಕಾರವನ್ನು‌ ಒಂದೊಂದಾಗಿ ಕಿತ್ತುಕೊಂಡು ಒಕ್ಕೂಟವ್ಯವಸ್ಥೆಯನ್ನು ಬುಡಮೇಲುಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಸರ್ವಾಧಿಕಾರವನ್ನು ಪಕ್ಷಾತೀತವಾಗಿ ಖಂಡಿಸಬೇಕಾಗಿದೆ. ಸಿಎಂ ಬಿಎಸ್​ವೈ​ ಅವರು ಪಕ್ಷದ ಹಂಗಿಗೆ ಬೀಳದೆ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿ ಅನ್ಯಾಯದ ವಿರುದ್ಧ ದನಿ ಎತ್ತುವ ದಿಟ್ಟತನ ತೋರಬೇಕೆಂದು ಟ್ವಿಟರ್​ನಲ್ಲಿ ಗುಡುಗಿದ್ದಾರೆ.

ಇದೆಲ್ಲಾ ಸರಿ. ಆದರೆ, ಟ್ವಿಟರ್​​ನಲ್ಲಿ ಕರೊನಾ ವೈರಸ್​ ಬದಲಾಗಿ ಕರೊನಾ(@corona) ಎಂದಷ್ಟೇ ಬರೆದು ಟ್ಯಾಗ್​ ಮಾಡಿದ್ದಾರೆ. ಟ್ವಿಸ್ಟ್​ ಏನೆಂದರೆ... ಕರೊನಾ ಎಂಬ ಟ್ಯಾಗ್​ ಅಕ್ಷರದ ಮೇಲೆ ಕ್ಲಿಕ್​ ಮಾಡಿದರೆ, ಆ ಲಿಂಕ್​ ನೇರವಾಗಿ ಕರೊನಾ ಎಂಬ ಆಲ್ಕೋಹಾಲ್​ ಬ್ರ್ಯಾಂಡ್​ನ ಅಧಿಕೃತ ಟ್ವಿಟರ್​ ಖಾತೆಗೆ ಹೋಗುತ್ತದೆ. ಇದೇ ವಿಚಾರ ಇದೀಗ ಟೀಕೆಗೆ ಗುರಿಯಾಗಿದೆ. ಇದನ್ನು ಗಮನಿಸಿರುವ ನೆಟ್ಟಿಗರೊಬ್ಬರು ದಿಟ್ಟತನ ತೋರುವುದಕ್ಕೆ @corona ಬೇಕೇ ಬೇಕಾ ಎಂದು ಸಿದ್ದರಾಮಯ್ಯ ಸರ್​ ಜಿ ಎಂದು ಕಾಲೆಳೆದಿದ್ದಾರೆ.