ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟು ದಿನಗಳ ಕಾಲ ದೆಹಲಿಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ವೀಕ್ಷಿಸುವ ಜತೆಗೆ ತಾವು ಸಹ ಮೋದಿಯವರಂತೆ ರಾಜ್ಯದಲ್ಲಿ ಜನಪರ ಆಡಳಿತ ನಡೆಸಲಿ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಗುರುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ 11 ವರ್ಷದ ಅಭಿವೃದ್ಧಿಪರ ಆಡಳಿತಕ್ಕೆ ಶೂನ್ಯ ಅಂಕ ನೀಡುವ ಹೇಳಿಕೆ ಮೂಲಕ ಸಿಎಂ ಸಿದ್ದರಾಮಯ್ಯ ಉಡಾಫೆ ವರ್ತನೆ ತೋರಿದ್ದಾರೆ. ಮುಖ್ಯಮಂತ್ರಿ ಅವರ ಮಾತುಗಳನ್ನು ರಾಜ್ಯದ ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ವರ್ತನೆ ಬಿಟ್ಟು ಮೋದಿಯವರ ಆಡಳಿತ ನೋಡಿ ಕಲಿಯಲಿ ಎಂದು ಸಲಹೆ ನೀಡಿದರು.
ನಾನು ಸಹ ಈ ಮೊದಲು ಕಾಂಗ್ರೆಸ್ನಲ್ಲಿದೆ. ಅಂದಿನ ಸಿದ್ದರಾಮಯ್ಯ ಅವರಿಗೂ, ಇಂದಿನ ಸಿದ್ದರಾಮಯ್ಯ ಅವರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಕಾಂಗ್ರೆಸ್ ಮುಖಂಡರಿಗೆ ನೈತಿಕತೆ ಇಲ್ಲ. ಮೋದಿಯವರ ಜನಪರ ಆಡಳಿತ ಕಂಡು ಮೈಪರಚಿಕೊಳ್ಳುತ್ತಿದ್ದಾರೆ. ತಮಗೆ ಈ ರೀತಿಯ ಆಡಳಿತ ನಡೆಸಲು ಸಾಧ್ಯವಾಗದ ಕಾರಣ ಅಸಹಾಯಕರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಮನಬಂದಂತೆ ಮಾತನಾಡುವ ಕಾಂಗ್ರೆಸ್ ಮುಖಂಡರು ಚರ್ಚೆಗೆ ಬರಲಿ. ಕಾಂಗ್ರೆಸ್ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಸಾಕು ಎಂದರು.
ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆಗೆ ಸೇರ್ಪಡೆ ವಿಷಯ ಚರ್ಚೆ ನಡೆಯುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಸೋಮಣ್ಣ, ಇದು ತೋಳ ಮತ್ತು ಕುರಿಮರಿ ಕಥೆಯಂತಿದೆ ಎಂದು ಲೇವಡಿ ಮಾಡಿದರು.
</p><p>ಭಾರತ ಆರ್ಥಿಕವಾಗಿ ವಿಶ್ವದ ನಾಲ್ಕನೇ ಬಲಿಷ್ಠ ರಾಷ್ಟ್ರವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ತಲುಪುತ್ತಿರಲಿಲ್ಲ. ಮೋದಿ ಅವರು ಪ್ರಧಾನಿ ಆದ ಮೇಲೆ ಪಂಚಾಯತ್ ವ್ಯವಸ್ಥೆ ಸಶಕ್ತವಾಗಿದೆ. ದೇಶದ ರಕ್ಷಣಾ ಇಲಾಖೆ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಅಪರೇಷನ ಸಿಂಧೂರ್ ಸ್ಪಷ್ಟಪಡಿಸಿದೆ ಎಂದು ಹೇಳಿದರು.