ಶಿವಮೊಗ್ಗ:ಆರ್‌ಎಸ್‌ಎಸ್ ಟೀಕೆ ಮಾಡುವ ಸಿದ್ದರಾಮಯ್ಯ ಒಂದೆರಡು ದಿನ ಆರ್‌ಎಸ್‌ಎಸ್ ಶಾಖೆಗೆ ಬಂದು ಸಂಘ ಕಾರ್ಯದ ಬಗ್ಗೆ ತಿಳಿದುಕೊಳ್ಳಲಿ. ರಾಷ್ಟ್ರಭಕ್ತ ಸಂಘಟನೆ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ನೂರು ಬಾರಿ ಯೋಚಿಸಬೇಕು. ಈಗ ಮಾಡಿರುವ ಟೀಕೆಗೆ ಆರ್‌ಎಸ್‌ಎಸ್‌ನ ಕ್ಷಮೆ ಕೋರಬೇಕೆಂದು ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಗುಂಪುಗಾರಿಕೆ ಇರುವುದು ಆರ್‌ಎಸ್‌ಎಸ್‌ನಲ್ಲಲ್ಲ, ಕಾಂಗ್ರೆಸ್‌ನಲ್ಲಿ. ಸಿದ್ದರಾಮಯ್ಯ ಕುರುಬರ ಗುಂಪು ಕಟ್ಟಿದರೆ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಗುಂಪು ಕಟ್ಟುವ ಮೂಲಕ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಗುಂಪುಗಾರಿಕೆ ನಡೆಸುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಸಿದ್ದರಾಮಯ್ಯ ರಾಜಕೀಯ ತೆವಲಿಗಾಗಿ ಆರ್‌ಎಸ್‌ಎಸ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಆರ್‌ಎಸ್‌ಎಸ್ ಸ್ವಾಭಿಮಾನ, ದೇಶಪ್ರೇಮ ಬೆಳೆಸುವ ಸಂಘಟನೆಯಾಗಿದೆ. ಅವರು ಸಂಘದ ಶಾಖೆಗೆ ಬರುವುದಾದರೆ ನಾನೇ ಕರೆದುಕೊಂಡು ಹೋಗುತ್ತೇನೆ. ಆರ್‌ಎಸ್‌ಎಸ್ ಬಗ್ಗೆ ಏನೂ ಗೊತ್ತಿಲ್ಲದೇ ಟೀಕೆ ಮಾಡುವುದು ಸರಿಯಲ್ಲ ಎಂದರು.
ಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆಯೇ ಸಿದ್ದರಾಮಯ್ಯ ಅವರಿಗಿಲ್ಲ. ಶೇ.80 ಹಿಂದುಗಳಿರುವ ದೇಶದಲ್ಲಿ ಶೇ.20ರಷ್ಟಿರುವ ಮುಸ್ಲಿಂರು ಬಹುಸಂಖ್ಯಾತರ ಮೇಲೆ ಹಲ್ಲೆ ಮಾಡುತ್ತಾರೆ ಎಂದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಷ್ಟ್ರದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.