ಮೈಸೂರು: ಸಚಿವ ಜಮೀರ್ ಅಹ್ಮದ್ ಖಾನ್ ಜತೆ ತಾವು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ್ದನ್ನು ಟೀಕಿಸಿದ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಯಾವ ವಿಮಾನದಲ್ಲಿ ಓಡಾಡುತ್ತಾರೆ? ಅವರು ಓಡಾಡೋದು ಐಷಾರಾಮಿ ವಿಮಾನದಲ್ಲಿ ಅಲ್ಲವೇ? ಮೊದಲು ಈ ಬಗ್ಗೆ ಬಿಜೆಪಿಯವರನ್ನು ಮಾಧ್ಯಮ ದವರು ಪ್ರಶ್ನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ 146 ಸಂಸದರನ್ನು ಅಮಾನತುಗೊಳಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಸರ್ವಾಧಿಕಾರದ ಪರಮಾವಧಿ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಂಬಿಕೆ ಇಲ್ಲ. ವಿಪಕ್ಷಗಳ ಮಾತನ್ನು ಕೇಳಿಸಿಕೊಳ್ಳುವುದಿಲ್ಲ ಅಂದರೆ ಏನರ್ಥ? ಬಿಜೆಪಿ ಪ್ರಜಾಪ್ರಭುತ್ವವೇ ಇಲ್ಲ ಎಂಬ ವಾತಾವರಣ ಸೃಷ್ಟಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಯಾರೇ ನಡೆದುಕೊಂಡರೂ ಜನರು ಸಹಿಸೋದಿಲ್ಲ. ಜನರು ಮುಂಬರುವ ಚುನಾವಣೆಯಲ್ಲೂ ಸೂಕ್ತ ತೀರ್ಮಾನ ಮಾಡುತ್ತಾರೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ಸಂಸದರನ್ನು ಅಮಾನತುಗೊಳಿಸಿದ ಇತಿಹಾಸ ಇಲ್ಲ. ಪ್ರತಿಪಕ್ಷ ಸಂಸದರನ್ನು ಹೊರಗಿಟ್ಟು ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದ್ದು, ಇದು ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
ಕೋವಿಡ್ ವಿಚಾರದಲ್ಲಿ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ಜನದಟ್ಟಣೆ ಇರುವ ಜಾಗದಲ್ಲಿ ಜನರು ಮಾಸ್ಕ್ ಧರಿಸಬೇಕು ಎಂದು ತಾಂತ್ರಿಕ ಸಮಿತಿ ಸಲಹೆ ನೀಡಿದ್ದು, ಜನರು ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.