ಬೆಂಗಳೂರು: ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿರುವ ಅವರು, ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಲಾಗಿತ್ತು, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ 24,941.73 ಕೋಟಿ ಪರಿಹಾರ ಕೇಳಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರ ಸರ್ಕಾರ ನೀಡಿರುವುದು ರೂ.1652 ಕೋಟಿ ಮಾತ್ರ. ರಾಜ್ಯ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ. ಮಳೆ, ಪ್ರವಾಹ ಬಂದು ಮೂರು ತಿಂಗಳುಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ 51,812 ಸಂತ್ರಸ್ತರಿಗೆ ನೀಡಿರುವ ಪರಿಹಾರ ಕೇವಲ 36,57,79,972 ರೂ.ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ 85,996 ಸಂತ್ರಸ್ತರಿಗೆ 70,70,87,961 ರೂಪಾಯಿ ಪರಿಹಾರ ಇನ್ನಷ್ಟೇ ನೀಡಬೇಕಾಗಿದೆ. ಉಳಿದವರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.