ಜಿಲ್ಲೆ

ಸಿದ್ದರಾಮಯ್ಯ, ಪಾರ್ವತಿ ವಿಚಾರಣೆ ಸದ್ಯಕ್ಕಿಲ್ಲ?

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎನ್.ಪಾರ್ವತಿ ಅವರ ವಿಚಾರಣೆ ಸದ್ಯಕ್ಕೆ ಅನುಮಾನವಾಗಿದ್ದು, ಇದರಿಂದ ಉಭಯರು ಕೆಲ ದಿನಗಳವರೆಗೆ ನಿರಾಳವಾಗಿ ಇರಬಹುದು.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಕ್ರಮವಾಗಿ ಮೊದಲ ಮತ್ತು 2ನೇ ಆರೋಪಿಗಳಾಗಿದ್ದು, 3ನೇ ಮತ್ತು 4ನೇ ಆರೋಪಿಗಳಾದ ಸಿಎಂ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ವಿಚಾರಣೆಯನ್ನು ಈಗಾಗಲೇ ಲೋಕಾಯುಕ್ತ ಪೊಲೀಸರು ನಡೆಸಿದ್ದರು.

ದಸರಾ ಬಳಿಕ ಉಳಿದ ಎ1, ಎ2 ಆರೋಪಿಗಳಿಗೂ ನೋಟಿಸ್ ನೀಡಿ ವಿಚಾರಣೆ ಹಾಜರಾಗಲು ಸೂಚಿಸುವ ಸಾಧ್ಯತೆ ಇತ್ತು. ಆದರೀಗ ಅವರ ವಿಚಾರಣೆ ಇನ್ನಷ್ಟು ದಿನ ವಿಳಂಬವಾಗುವ ನಿರೀಕ್ಷೆ ಇದೆ. ಇನ್ನೊಂದು ವಾರ ಇಬ್ಬರಿಗೂ ಆತಂಕ ಇಲ್ಲವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹವೇ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ತಲೆನೋವು ಆಗಿದೆ. 2010ರವರೆಗೆ ಸಿಕ್ಕ ದಾಖಲೆಗಳ ತಾಳೆ ಹಾಕಿರುವ ತನಿಖಾಧಿಕಾರಿಗಳು, ಕಡತಗಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಪಾತ್ರವಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗಿದೆ ಎಂದು ಹೇಳಲಾಗುತ್ತಿದೆ.

ಎ3, ಎ4 ಬಳಿಯ ದಾಖಲೆಗಳನ್ನು ಸಂಗ್ರಹಿಸಿರುವ ಲೋಕಾಯುಕ್ತ ಪೊಲೀಸರು, 2010ರ ಬಳಿಕ ಸಿಎಂ ಭಾವಮೈದುನನಿಂದ ಸಿಎಂ ಪತ್ನಿಗೆ ಆಸ್ತಿದಾನ ಕಡತಗಳನ್ನು ಪರಿಶೀಲಿಸಿದ್ದಾರೆ. 2010ರಿಂದ ಈವರೆಗಿನ ದಾಖಲೆಗಳು ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ.

ಭೂ ದಾಖಲೆಯ ಸಹಾಯಕ ನಿರ್ದೇಶಕ(ಎಡಿಎಲ್‌ಆರ್), ಭೂ ಮಾಪನಾಧಿಕಾರಿ, ಮುಡಾ, ಕಂದಾಯ ಇಲಾಖೆ, ಉಪನೋಂದಣಿ ಅಧಿಕಾರಿಗಳಿಂದಲೂ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ವಿಚಾರಣೆ ವೇಳೆ ಎ4, ಎ3 ಆರೋಪಿಗಳ ಹೇಳಿಕೆಯಲ್ಲೂ ಸಾಮ್ಯತೆ ಕಂಡು ಬರುತ್ತಿಲ್ಲ. ಇವರ ಹೇಳಿಕೆ ಹೊಂದಾಣಿಕೆ ಆಗದಿರುವುದು ತನಿಖಾಧಿಕಾರಿಗಳಿಗೆ ತಲೆ ಬಿಸಿ ಮಾಡಿದೆ.