ಜಿಲ್ಲೆ

ಸಿದ್ದರಾಮಯ್ಯಗೆ ಕಾಡುತ್ತಿದೆ ಅಸ್ಥಿರತೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಥಿರತೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸ ಅವರಿಗಿಲ್ಲ. ಹೀಗಾಗಿ, ಮೇಲಿಂದ ಮೇಲೆ ನಾನೇ ಸಿಎಂ..., ನಾನೇ ಸಿಎಂ.. ಎಂದು ಹೇಳಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದುಕಿರುವ ವ್ಯಕ್ತಿಗೆ ಮೇಲಿಂದ ಮೇಲೆ ನಾನು ಬದುಕಿದ್ದೇನೆ, ನಾನು ಬದುಕಿದ್ದೇನೆ.. ಎಂದು ಹೇಳುವ ಅವಶ್ಯಕತೆಯಾಗಲಿ ಅಥವಾ ಅನಿವಾರ್ಯತೆಯಾಗಲಿ ಇರುವುದಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಪಾಳಯದಲ್ಲಿ ಕ್ರಾಂತಿ ಕಡಿಮೆ ಆಗಿರಬಹುದು. ಅದನ್ನು ಮರೆಮಾಚಲು ಸರ್ಕಾರ ಜಾತಿ ಗಣತಿ ಆರಂಭಿಸಿದೆ. ಅದರಲ್ಲೂ ಹಲವಾರು ರೀತಿಯ ಗೊಂದಲಗಳು ಇವೆ. ಜಾತಿ ಕಾಲಂನಲ್ಲಿ ಮುಜಾವರ ಮುಸ್ಲಿಂ, ಮುಸ್ಲಿಂ ಬ್ರಾಹ್ಮಣ ಸೇರಿದಂತೆ ಅನೇಕ ರೀತಿಯ ತಪ್ಪುಗಳಿವೆ. ಈ ರೀತಿಯ ಹೊಸ ಜಾತಿಗಳನ್ನು ಎಲ್ಲಿಂದ ಹುಟ್ಟುಹಾಕಿದರು ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು ಎಂದರು.

ಜಿಎಸ್​ಟಿ ಪರಿಹಾರ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ದೂರುವ ಕಾಂಗ್ರೆಸ್ಸಿಗರು, ಯುಪಿಎ ಹಾಗೂ ಅದಕ್ಕೂ ಮೊದಲಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯಕ್ಕೆ ಎಷ್ಟು ಪಾಲು ಬಂದಿದೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ ಜೋಶಿ, ರಾಜ್ಯ ಸರ್ಕಾರಗಳು ಕೇಳುವ ಮುಂಚೆಯೇ ಕೇಂದ್ರ ಅವುಗಳ ಪಾಲನ್ನು ಕೊಟ್ಟುಬಿಡುತ್ತದೆ. ಆದರೆ, ಮೊದಲು ರಾಜ್ಯ ಸರ್ಕಾರದ ಪಾಲಿಗಾಗಿ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸುವ ಅನಿವಾರ್ಯತೆ ಇತ್ತು ಎಂದರು.

ರಾಜ್ಯವನ್ನು ಆರ್ಥಿಕವಾಗಿ ಸರಿಯಾಗಿ ನಡೆಸಲು ಬಾರದ ಕಾಂಗ್ರೆಸ್ ಸರ್ಕಾರ, ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದರು.