ಜಿಲ್ಲೆ

ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ; ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್

ಮೈಸೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಪಡೆದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ ಅವರು ಬದಲಿ ನಿವೇಶನ ಪಡೆದ ವಿಚಾರದಲ್ಲಿ ಸಿಎಂ ತಪ್ಪಿಲ್ಲ. ಈ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಹೋದರೂ ಅವರದ್ದು ಎಲ್ಲೂ ತಪ್ಪು ಬರೋದಿಲ್ಲ. ಈ ವಿಷಯದಲ್ಲಿ ಅವರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ ಎಂದರು.


ಮುಡಾ ಒಂದು ಸ್ವಾಯತ್ತ ಸಂಸ್ಥೆ. ಈ ವಿಷಯದಲ್ಲಿ ಸ್ವಯಂ ಪ್ರೇರಣೆಯಿಂದ ತೀರ್ಮಾನವಾಗಿಲ್ಲ. 2020ರಲ್ಲಿ ಬದಲಿ ನಿವೇಶನ ನೀಡುವ ಕುರಿತು 4 ಬಾರಿ ಮುಡಾ ಸಮಿತಿಯಲ್ಲಿ ಚರ್ಚೆ ಆಗಿತ್ತು.

ಆ ಸಂದರ್ಭದಲ್ಲಿ ಮುಡಾ ಸದಸ್ಯರಾಗಿ ಬಿಜೆಪಿ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಬಿ.ಹರ್ಷವರ್ಧನ್, ಜೆಡಿಎಸ್‌ನ ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್, ಬಿಜೆಪಿಯ ಎಲ್ಲ ಸದಸ್ಯರೊಂದಿಗೆ ಚರ್ಚೆ ಮಾಡಿ ನಿವೇಶನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.


ಈ ಪ್ರಕರಣವೊಂದು ರಾಜಕೀಯ ಪಿತೂರಿ ಮತ್ತು ಷಡ್ಯಂತ್ರ. ಇದರ ಭಾಗವಾಗಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.