ಜಿಲ್ಲೆ

ದಲಿತ ಸಮುದಾಯಕ್ಕೆ ಶಕ್ತಿ ತುಂಬಿದ್ದ ಸಿದ್ದರಾಮಯ್ಯ

Davangere - Prakash Arali

ಹೊಸದುರ್ಗ: ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಧ್ವನಿಯಾಗುವ ಮೂಲಕ ರಾಜಕೀಯ ಶಕ್ತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದು ಕೆಲ್ಲೋಡು ಕನಕಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಶ್ಲಾಘಿಸಿದರು.

ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ 2 ನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕೇವಲ ಕುರುಬ ಸಮಾಜವನ್ನೇ ಬೆಳೆಸಿದ್ದಾರೆ ಎಂದು ಹೇಳಿರುವುದು ಅವರ ಹೊಟ್ಟೆಕಿಚ್ಚಿನ ಮಾತುಗಳಾಗಿವೆ. ಪ್ರಭುದ್ಧ ರಾಜಕಾರಣಿ ಇಂತಹ ಮಾತುಗಳನ್ನು ಅಡಬಾರದಾಗಿತ್ತು. ಸಿದ್ದರಾಮಯ್ಯ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಲಿಂಗಾಯತರು ಹಾಗೂ ಒಕ್ಕಲಿಗರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರ ಸಮುದಾಯದವರೇ ಹತ್ತು, ಹನ್ನೆರಡು ಜನ ಮಂತ್ರಿಯಾಗುತ್ತಿದ್ದರು. ಅದರೆ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕುರುಬ ಸಮುದಾಯದ ಒಬ್ಬರೂ ಮಂತ್ರಿಯಾಗಲಿಲ್ಲ. ಇಂತಹ ಇತಿಹಾಸ ಹೊಂದಿರುವ ಸಿದ್ದರಾಮಯ್ಯ ಕುರಿತು ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿರುವ ಬಿ.ಕೆ.ಹರಿಪ್ರಸಾದ್ ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಹಿಂದುಳಿದ ಸಣ್ಣ ಪುಟ್ಟ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸವನ್ನು ಕುರುಬ ಸಮುದಾಯ ಮಾಡುತ್ತಿದೆ. 2 ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಕುರುಬ ಸಮುದಾಯಕ್ಕೆ ಸಹಾಯ ಮಾಡಿಲ್ಲ. ಹಿಂದುಳಿದ ಸಮುದಾಯಗಳು ಅಧಿಕಾರ ನೀಡಿದವರ ಕುರಿತು ನೆನಪು ಮಾಡಿಕೊಳ್ಳಬೇಕು. ಅವರ ಬೆಳವಣಿಯನ್ನು ನಾವು ವಿರೋಧಿಸುವುದಿಲ್ಲ. ಜಾಗೃತರಾಗುವ ಅವಶ್ಯಕತೆ ಇದೆ ಎಂದರು.

ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಸಂಗೋಳ್ಳಿ ರಾಯಣ್ಣನ ದೇಶಭಕ್ತಿಯಿಂದಾಗಿ ಅವರ ಹೆಸರು ಶಾಶ್ವತವಾಗಿದೆ. ರಾಯಣ್ಣನ ಬದುಕು ಮತ್ತು ಅದರ್ಶ ಯುವಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ರಾಯಣ್ಣನ ಶೌರ್ಯ, ಹೊರಾಟವನ್ನು ಗೌರವಿಸಬೇಕು. ನಾಗೇನಹಳ್ಳಿಯ ಯುವಕರು ರಾಯಣ್ಣನ ಪ್ರತಿಮೆ ಸ್ಥಾಪಿಸಿರುವುದು ಮಾದರಿ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಿಂತಕ ನಿಕೇತ್‌ರಾಜ್ ಮೌರ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಂಜುನಾಥ್, ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ್, ಬಿ.ಜಿ.ಅರುಣ್, ಉದ್ಯಮಿ ಡಿ.ಎಸ್.ಪ್ರದೀಪ್, ಡಾ.ರವಿ, ನಟರಾಜ್ ಮತ್ತಿತರರು ಹಾಜರಿದ್ದರು.