ಜಿಲ್ಲೆ

ಸಿದ್ದರಾಮಯ್ಯ ಇಲ್ಲದ ಹೋರಾಟದಲ್ಲಿ ಭಾಗವಹಿಸಲ್ಲ ; ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಕೂಗು

Tumakuru

ತುಮಕೂರು: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವ ವಹಿಸಲು ಒತ್ತಾಯಿಸಬೇಕು, ಸಿದ್ದರಾಮಯ್ಯ ಅವರಿಲ್ಲದ ಹೋರಾಟದಲ್ಲಿ ನಾವು ಭಾಗವಹಿಸುವುದಿಲ್ಲ ಎಂಬ ಕೂಗು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಕಾರಿಣಿಯಲ್ಲಿ ಕೇಳಿಬಂದಿದೆ.

ಮೀಸಲಾತಿಗೆ ಆಗ್ರಹಿಸಿ ಶಿಕಾರಿಪುರದಲ್ಲಿ ನಡೆಯಲಿರುವ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಭಾಗವಹಿಸುವಂತೆ ಮನವೊಲಿಸುವ ಬಗ್ಗೆಯೇ ತುಮಕೂರಿನಲ್ಲಿ ಶನಿವಾರದಿಂದ ಎರಡು ದಿನ ಆಯೋಜಿಸಿದ್ದ ಪ್ರದೇಶ ಕುರುಬರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿದೆ.

ಸಭೆ ಮುಕ್ತಾಯದ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಶಾಂತಪ್ಪ, ಸಿದ್ದರಾಮಯ್ಯ ಹೋರಾಟದಲ್ಲಿ ನೇತೃತ್ವ ವಹಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದ್ದು, ಹೋರಾಟದ ಬಗ್ಗೆ ಅವರಿಗಿರುವ ಎಲ್ಲ ಸಂಶಯಗಳ ಬಗ್ಗೆಯೂ ಭೇಟಿಯಾಗಿ ಮನವರಿಕೆ ಮಾಡಿ ಮನವಿ ಮಾಡಲಾಗುವುದು ಎಂದರು.

ಸಮಾಜದ ಸ್ವಾಮೀಜಿಗಳು, ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು, ಸಚಿವರಾದ ಕೆ.ಎಸ್.ಈಶ್ವರಪ್ಪ, ಬೈರತಿ ಬಸವರಾಜು, ಎಂಟಿಬಿ ನಾಗರಾಜು, ಶಂಕರ್, ಬಂಡೆಪ್ಪ ಕಾಶಂಪೂರ್ ಸೇರಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಶೀಘ್ರದಲ್ಲಿಯೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ, ಅವರೆಂದೂ ಎಸ್‌ಟಿ ಹೋರಾಟಕ್ಕೆ ವಿರೋಧವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹೋರಾಟಕ್ಕೆ ಆರ್‌ಎಸ್‌ಎಸ್ ಸಂಘಟನೆ ಧನಸಹಾಯ ಮಾಡುತ್ತಿದೆ ಹಾಗೂ ಭಿನ್ನಾಭಿಪ್ರಾಯ, ಸಮಸ್ಯೆಗಳು ಸೇರಿ ಇತರ ಸಂಶಯ ಸಿದ್ದರಾಮಯ್ಯ ಅವರಿಗಿದೆ. ಎಸ್‌ಟಿ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಜ.15ರಂದು ಕಾಗಿನೆಲೆಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಅವರು ಪಾಲ್ಗೊಳ್ಳುವಂತೆ ಮನವೊಲಿಸುತ್ತೇವೆ ಎಂದು ತಿಳಿಸಿದರು.

ಸಂಘದ ಕಾರ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಬಿ.ಕೆ.ಮಂಜುನಾಥ್ ಮುಖಂಡರು ಇದ್ದರು.

400 ಕೋಟಿ ರೂಪಾಯಿ ಮೀಸಲಿಡಿ: ಕುರುಬರ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಪ್ರಾಧಿಕಾರ ರಚಿಸಿ 400 ಕೋಟಿ ರೂಪಾಯಿ ಮೀಸಲಿಬೇಕು ಎಂದು ಪ್ರದೇಶ ಕುರುಬರ ಸಂಘದ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ರಚಿಸಲಾಗಿದ್ದ ಕುಲಶಾಸ್ತ್ರ ಅಧ್ಯಯನ ಸಮಿತಿಯಿಂದ ವರದಿ ಪಡೆಯಬೇಕು, ಜಾತಿ ಗಣತಿ ವರದಿ ಬಿಡಗಡೆ ಮಾಡಬೇಕು, ಪ್ರಾಧಿಕಾರ ರಚನೆ ಪ್ರಮುಖ ಬೇಡಿಕೆಗಳಾಗಿವೆ ಎಂದರು.

ಮೈಸೂರಿನ ಬಿ.ಸುಬ್ರಹ್ಮಣ್ಯಆಯ್ಕೆ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಮೈಸೂರಿನ ಬಿ.ಸುಬ್ರಹ್ಮಣ್ಯ ಅವರನ್ನು ಸಂಘದ ಪ್ರಭಾರ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿದ್ದ ಬಳ್ಳಾರಿಯ ಕೃಷ್ಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕಾರ್ಯಾಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಅವರನ್ನೇ ನೇಮಿಸುವ ಪ್ರಸ್ತಾಪಕ್ಕೆ ನಿರ್ದೇಶಕರು ಒಪ್ಪಿಗೆ ಸೂಚಿಸಿದರು.