ಜಿಲ್ಲೆ

ಸಿದ್ದರಾಮಯ್ಯ ಭಂಡ ರಾಜಕಾರಣಿ

ಮರಿದೇವ ಹೂಗಾರ

ಹುಬ್ಬಳ್ಳಿ: ಮುಡಾ ಹಾಗೂ ವಾಲ್ಕೀಕಿ ಹಗರಣ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದಲ್ಲಿ ಮೈಸೂವರೆಗೆ ಪಾದಯಾತ್ರೆ ಮಾಡಿದೆವು. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅವರು ಪಾದಯಾತ್ರೆ ಮುಟ್ಟುವುದರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ, ಭಂಡ ರಾಜಕಾರಣಿ ಆಗಿರುವುದರಿಂದ ರಾಜೀನಾಮೆ ನೀಡಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಲೇವಡಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ ದೂರುಗಳ ಮೇಲೆ ದೂರು ದಾಖಲಾಗುತ್ತಿವೆ. ಆದರೂ ಅವರು ಅಧಿಕಾರಕ್ಕೆ ಅಂಟಿಕೊಂಡೇ ಕುಳಿತಿದ್ದಾರೆ. ತಮ್ಮ ಬುಡಕ್ಕೆ ಬರುತ್ತದೆ ಎಂದು ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರ ಹೆಸರನ್ನು ಚಾರ್ಜ್ ಸೀಟ್‌ನಿಂದ ಕೈ ಬಿಡಲಾಗಿದೆ. ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ನಡೆದಿದೆ ಎಂದರು.
ಮುಂದಿನ ದಿನಗಳಲ್ಲಿ ನಾವು ಕಾನೂನು ಬದ್ಧವಾಗಿ ಹೋರಾಟ ಮಾಡುತ್ತೇವೆ. ಬಿಜೆಪಿಯಲ್ಲಿ ಆಂತರಿಕ ಅಸಮಾಧಾನವಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ಆಗಿರುವುದು ಸತ್ಯ. ಆದರೆ ಕದ್ದುಮುಚ್ಚಿ ಮಾಡಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ. ನಮ್ಮ ಪಕ್ಷದ ಹೈಕಮಾಂಡ್ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅವರು ಮತ್ತೊಂದು ಯಾತ್ರೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎನ್ನುವ ಸ್ಥಿತಿಯಿಲ್ಲ, ಅದೇನಿದ್ದರೂ ಕಾಂಗ್ರೆಸ್‌ಗೆ ಅನ್ವಯವಾಗುತ್ತದೆ ಎಂದು ಕಿಚಾಯಿಸಿದರು.