ಮೈಸೂರು: ಅಯೋಧ್ಯೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವತಃ ಸಿದ್ದರಾಮಯ್ಯ ಅವರೇ ನಾನು ಆಸ್ತಿಕ ನಾಸ್ತಿಕ ಅಲ್ಲ ಎಂದು ಹೇಳಿದ್ದಾರೆ. ಅವರು ನಾಸ್ತಿಕರಾಗಿದ್ದರೆ ಅವರ ಕ್ಷೇತ್ರದಲ್ಲಿ ರಾಮಮಂದಿರ ಕಟ್ಟುತ್ತಿರಲಿಲ್ಲ, ದೇವಸ್ಥಾನಗಳಿಗೆ ಅನುದಾನ ನೀಡುತ್ತಿರಲಿಲ್ಲ. ರಾಜ್ಯದ ಅನೇಕ ದೇವಾಲಯಗಳಿಗೆ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ ಎಂದರು.
ರಾಮಮಂದಿರ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು. ರಾಮ ನಮ್ಮ ಮನಸ್ಸಿನಲ್ಲಿದ್ದಾನೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಚರ್ಚೆ ಅಪ್ರಸ್ತುತವಾಗಿದೆ. ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ಯಾರು ಈ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ಹೇಳಿದ ಮೇಲೆ ಈಗ ಯಾರು ತುಟಿಕ್ ಪಿಟಿಕ್ ಅನ್ನುತಿಲ್ಲ. ಹೀಗಾಗಿ ಡಿಸಿಎಂ ಆಯ್ಕೆ ವಿಚಾರವೆ ಅಪ್ರಸ್ತುತ. ನಾನು ಸಚಿವನಾದರೂ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದೇನೆ. ಸಚಿವನಾದ ಬಳಿಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ಆಗುತ್ತಿಲ್ಲ. ಹಾಗಾಗಿ ಕಾರ್ಯಾಧ್ಯಕ್ಷ ಸ್ಥಾನ ಬದಲಾಗಬಹುದು ಎಂದು ಹೇಳಿದರು.
ಮೈಸೂರು ಭಾಗದಲ್ಲಿ ಮಾನವ-ವನ್ಯಜೀವಿಗಳ ನಡುವಿನ ಸಂಘರ್ಷ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಲಾಗುವುದು. ಈ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಹುಡುಕುತ್ತೇವೆ ಎಂದು ಹೇಳಿದರು.