ಸಿದ್ದರಾಮಯ್ಯ ಹಾಗೂ ರಮೇಶ್ ಜಾರಕಿಹೊಳಿ ಮಾತುಕತೆ  
ಜಿಲ್ಲೆ

ಮೈಸೂರಿನಲ್ಲಿ ಸಿದ್ದರಾಮಯ್ಯ-ರಮೇಶ್ ಜಾರಕಿಹೊಳಿ ಭೇಟಿ, ಕುತೂಹಲ ಕೆರಳಿಸಿದ ಮಾತುಕತೆ

ಮೈಸೂರು: ರಾಜ್ಯ ರಾಜಕೀಯದಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ವಿವಾದಿತ ಸ್ಟಿಂಗ್ ಕಾರ್ಯಾಚರಣೆಯ ವಿಚಾರದ ನಡುವೆಯೇ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮೈಸೂರಿನಲ್ಲಿ ದಿಢೀರ್ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಅವರದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿರುವ ಬೆಳವಣಿಗೆಯ ಬೆನ್ನಲ್ಲೇ ಈ ಭೇಟಿ ನಡೆದಿದೆ. ಇದೇ ಸಂದರ್ಭದಲ್ಲಿ, ಈ ಹಿಂದೆ ರಮೇಶ್ ಜಾರಕಿಹೊಳಿ ಅವರು ಸಹ ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ವಿವಾದ ಎದುರಿಸಿದ್ದನ್ನು ಗಮನಿಸಿದರೆ, ಇಬ್ಬರು ನಾಯಕರ ಭೇಟಿಗೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ತಡೆಯಾಜ್ಞೆ ಪಡೆಯಬಾರದಿತ್ತು:

ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತರಬಾರದಿತ್ತು. ಧೈರ್ಯವಾಗಿ ಎದುರಿಸಿ ಫೈಟ್ ಮಾಡಬೇಕಿತ್ತು. ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿರುವುದಕ್ಕೆ ಸ್ಟಿಂಗ್ ಕಾರ್ಯಾಚರಣೆಯೇ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ನಾನು ಈಗ ಆ ಸ್ಟಿಂಗ್ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ಅವರನ್ನು ಬೇರೆಯದೇ ವಿಚಾರವಾಗಿ ಮಾತನಾಡಿಸಲು ಬಂದಿದ್ದೆ. ಇದು ಖಾಸಗಿ ಭೇಟಿ ಎಂದು ಹೇಳುವ ಮೂಲಕ ಭೇಟಿಯ ಹಿಂದಿನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

ಅರ್ಧ ಗಂಟೆಗೂ ಕಾಲ ಮಾತುಕತೆ:

ಮೈಸೂರಿನಲ್ಲಿ ನಡೆದ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ನಾಯಕರು ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿಷಯವೇನು, ಯಾವ ಉದ್ದೇಶಕ್ಕಾಗಿ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.

ಸಾಮಾನ್ಯವಾಗಿ ರಾಜಕೀಯ ನಾಯಕರ ಭೇಟಿಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗುವುದು ಸಹಜ. ವಿಭಿನ್ನ ರಾಜಕೀಯ ಪಕ್ಷಗಳಿಗೆ ಸೇರಿದ ಈ ಇಬ್ಬರು ನಾಯಕರು ಮುಖಾಮುಖಿಯಾಗಿ ಸುದೀರ್ಘವಾಗಿ ಚರ್ಚಿಸಿರುವುದು ವಿಶೇಷ ಗಮನ ಸೆಳೆದಿದೆ. ಅದರಲ್ಲೂ ಸ್ಟಿಂಗ್ ಕಾರ್ಯಾಚರಣೆಯ ವಿವಾದ ಮುನ್ನೆಲೆಗೆ ಬಂದಿರುವ ಸಮಯದಲ್ಲಿ ನಡೆದಿರುವ ಭೇಟಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.