ಅಂತೋಣಿ ಪಿ.ವಿ. ಸಿದ್ದಾಪುರ
ರಾಜರ ಆಳ್ವಿಕೆಯಲ್ಲಿ ಮೈಸೂರಿನಿಂದ ಪಿರಿಯಾಪಟ್ಟಣದವರೆಗೆ ರಸ್ತೆ ಮಾರ್ಗವಾಗಿ ತರುವ ಕಚ್ಚಾ ಪದಾರ್ಥಗಳನ್ನು ಮಾಲ್ದಾರೆ ಅರಣ್ಯ ಪ್ರದೇಶದ ಮೂಲಕ ಸಿದ್ದಾಪುರಕ್ಕೆ ಕುದುರೆ, ಎತ್ತಿನಗಾಡಿ ಹಾಯದಿಂದ ತೆಗೆದುಕೊಂಡು ಹೋಗಿ ಸಿದ್ಧವಸ್ತುಗಳನ್ನಾಗಿ ಮಾಡುತ್ತಿದ್ದರಿಂದ ಸಿದ್ದಾಪುರ ಎಂಬ ಹೆಸರು ಬಂದಿದೆ.
ಇಲ್ಲಿ ಕಚ್ಚಾ ಪದಾರ್ಥಗಳನ್ನು ಒಂದೆಡೆ ಶೇಖರಿಸಿ ಅದನ್ನು ಸಿದ್ಧವಸ್ತುವಾಗಿ ಮಾರ್ಪಡಿಸಿ ವ್ಯಾಪಾರ ಮಾಡಲಾಗುತ್ತಿತ್ತು. ಹೀಗೆ ಮಾಲುದಾರಿಯ ಮೂಲಕ ತಂದ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದ ಸ್ಥಳವನ್ನು ‘ಸಿದ್ದಪುರ’ ಎಂದು ಕರೆಯಲಾಗುತ್ತಿತ್ತು. ಸಿದ್ದಪುರವು ಕಾಲ ಕ್ರಮೇಣ ಸಿದ್ದಾಪುರ ಎಂದಾಯಿತು.
ಸಿದ್ದಾಪುರದ ಗುಹ್ಯ ಗ್ರಾಮದಲ್ಲಿ ಹಳೆಯ ಸಿದ್ದಾಪುರ ಎಂಬ ಊರಿದ್ದು, ಅದು ಕಚ್ಚಾ ವಸ್ತುಗಳನ್ನು ಸಿದ್ಧಪಡಿಸುತ್ತಿದ್ದ ಸಿದ್ದಾಪುರವೇ ಆಗಿತ್ತು. ಆ ಕಾಲದಲ್ಲಿ ಇಲ್ಲಿ ಒಂದು ಸಿನಿಮಾ ಥಿಯೇಟರ್ ಇದ್ದ ಕಾರಣ ಹೆಚ್ಚು ಜನರ ಓಡಾಟದ ಸ್ಥಳವಾಗಿತ್ತು. ಹಾಗಾಗಿ ಅಲ್ಲಿಯೇ ಸರಕುಗಳನ್ನು ತಂದು ಶೇಖರಣೆ ಮಾಡಲಾಗುತ್ತಿತ್ತು. ವ್ಯಾಪಾರ ಹಾಗೂ ಪಟ್ಟಣ ಬೆಳವಣಿಗೆಯಿಂದಾಗಿ ಈಗಿನ ಸಿದ್ದಾಪುರಕ್ಕೆ ಎಲ್ಲವೂ ಸ್ಥಳಾಂತರಗೊಂಡಾಗ ಮೂಲಸ್ಥಳವು ಹಳೆಯ ಸಿದ್ದಾಪುರವಾಯಿತು.
ಈ ಭಾಗದಲ್ಲಿ ಕೊಡಗಿನ ಜೀವ ನದಿಯಾದ ಕಾವೇರಿಯು ತುಂಬಿ ಹರಿಯುತ್ತದೆ. ಇಲ್ಲಿ 1883ರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಕುದುರೆ, ಎತ್ತಿನಗಾಡಿಯ ಸಂಚಾರಕ್ಕೆಂದು ಸಿದ್ದಾಪುರದಲ್ಲಿ ಇರುವ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟಲಾಗಿದೆ. ಸಿದ್ದಾಪುರ ನೆಲ್ಲಿಹುದಿಕೇರಿ ಮಧ್ಯೆ ಕಾವೇರಿ ನದಿಗೆ ಕಟ್ಟಲಾಗಿರುವ ಬ್ರಿಟಿಷರ ಕಾಲದ ಸೇತುವೆ 139 ವರ್ಷ ಪೂರೈಸಿದೆ. ಈ ಸೇತುವೆಯನ್ನು ಎಂದಿಗೂ ಜನ ‘ಓಲ್ಡ್ ಇಸ್ ಗೋಲ್ಡ್’ ಸೇತುವೆ ಎಂದು ಕರೆಯುತ್ತಾರೆ.
ಭಾರತವನ್ನು ಬ್ರಿಟಿಷರು ತಮ್ಮ ಕಪಿಮುಷ್ಟಿಯಲ್ಲಿರಿಸಿದ ನೆನಪುಗಳನ್ನು ಸಾರಿ ಹೇಳುತ್ತಿರುವ ಸಿದ್ದಾಪುರದ ಸೇತುವೆ ಕಾಮಗಾರಿಯು 1883ರಿಂದ 1885ರವರಗೆ ಎರಡು ವರ್ಷಗಳ ಕಾಲ ನಡೆಯಿತು. ಅಪೂರ್ವ ವಿನ್ಯಾಸವನ್ನು ಹೊಂದಿರುವ ಈ ಸೇತುವೆ ಕಲ್ಲುಗಳ ಜೋಡಣೆಯಿಂದ ಕಟ್ಟಲಾಗಿದೆ. ಬ್ರಿಟಿಷರ ಕಾಲದಲ್ಲಿ ಕಟ್ಟಲಾಗಿರುವ ಈ ಸೇತುವೆ ಆಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗಿರುವ ಸೇತುವೆಗಿಂತ ಶಕ್ತಿಶಾಲಿಯಾಗಿದೆ. ಸೇತುವೆಗೆ ಸುಣ್ಣ, ಮೊಟ್ಟೆ ಹಾಗೂ ಕಾಡುಕಲ್ಲುಗಳನ್ನು ಬಳಸಿ ಸೇತುವೆ ನಿರ್ಮಾಣ ಮಾಡಲಾಗಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಜೇಮ್ಸ್ ಗಾರ್ಡನ್ ಹಾಗೂ ಜೆ.ಬಿ.ಲಿಯಲ್ ಅವರು ಕಮಿಷನರ್‌ಗಳಾಗಿದ್ದ ಸಂದರ್ಭ ಸೇತುವೆ ಕಾಮಗಾರಿ ಆರಂಭವಾಗಿತ್ತು. ಲೆಫ್ಟಿನೆಂಟ್ ಕರ್ನಲ್ ಮೆಸ್ಸುರಿಯರ್ ಹಿರಿಯ ಇಂಜಿನಿಯರ್ ಆಗಿ ಹಾಗೂ ಎ.ಎಂ.ಮೈಸ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು.
ಸಿದ್ದಾಪುರ ಗ್ರಾಪಂಗೆ ಸೇರಿದ ದುಬಾರೆ ಮೀಸಲು ಅರಣ್ಯ ಪ್ರದೇಶದಲ್ಲಿ 1897ರಲ್ಲಿ ಬ್ರಿಟಿಷರು ಸ್ಥಾಪಿಸಿದ ಆನೆ ಶಿಬಿರವು ಕೊಡ ನಾಡಿನಾದ್ಯಂತ ಖ್ಯಾತಿ ಗಳಿಸಿದೆ. ಇಲ್ಲಿ ಬ್ರಿಟಿಷರ ಪ್ರವಾಸಿಮಂದಿರ (ಐಬಿ)ವನ್ನು ಇಂದಿಗೂ ಕಾಣಬಹುದು. ಶಿಬಿರಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ
ಸುಸಜ್ಜಿತ ಮಾರುಕಟ್ಟೆ ಇಲ್ಲ
ಗ್ರಾಮೀಣ ಭಾಗದ ಹತ್ತಾರು ಹಳ್ಳಿಗಳ ಜನತೆಗೆ ಸಿದ್ದಾಪುರವೇ ಮುಖ್ಯ ಪಟ್ಟಣ. ಪ್ರತಿ ಭಾನುವಾರ ಇಲ್ಲಿ ನಡೆಯುವ ವಾರದ ಸಂತೆ ವಿರಾಜಪೇಟೆ ತಾಲೂಕಿನಲ್ಲೇ ಅತಿ ದೊಡ್ಡ ಸಂತೆ ಎಂದು ಪ್ರಸಿದ್ಧಿ ಪಡೆದಿದೆ. ನೂರಾರು ವ್ಯಾಪಾರಿಗಳು, ಗ್ರಾಹಕರು ಇಲ್ಲಿ ಸೇರುತ್ತಾರೆ. ಮೈಸೂರಿನಿಂದ ವ್ಯಾಪಾರಿಗಳು ಮಾಲ್ದಾರೆ ಮೂಲಕ ಆಗಮಿಸುತ್ತಾರೆ. ಆದರೆ, ಸಿದ್ಧಪಡಿಸುತ್ತಿದ್ದ ಸಿದ್ದಾಪುರದ ವ್ಯಾಪಾರಿಗಳಿಗೆ ಇಂದಿಗೂ ವ್ಯಾಪಾರ ನಡೆಸಲು ಕಟ್ಟಡ ಇಲ್ಲ.
ಹೆಚ್ಚು ಗ್ರಾ.ಪಂ. ಸದಸ್ಯರು
ಸಿದ್ದಾಪುರ ಗ್ರಾಮ ವಿರಾಜಪೇಟೆ ತಾಲೂಕಿಗೆ ಸೇರಿದ್ದು, ರಾಜ್ಯದಲ್ಲಿಯೇ ಹೆಚ್ಚು ಗ್ರಾಪಂ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಾಗಿದೆ. ಇಲ್ಲಿನ ಪಂಚಾಯಿತಿಯೂ 25 ಸದಸ್ಯರನ್ನು ಹೊಂದಿದೆ. ಗ್ರಾಮವೂ ಭೌಗೋಳಿಕವಾಗಿ ವಿಸ್ತಾರವಾಗಿದೆ ಮತ್ತು 3424.26 ಹೆಕ್ಟೇರ್ ಅರಣ್ಯ ಪ್ರದೇಶಗಳನ್ನು ಈ ಗ್ರಾಮ ಹೊಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 9,372 ಜನಸಂಖ್ಯೆ ಇದ್ದು, ಸಿದ್ದಾಪುರದಿಂದ ಜಿಲ್ಲಾ ಕೇಂದ್ರ ಮಡಿಕೇರಿಗೆ 30 ಕಿ.ಮೀ. ಕ್ರಮಿಸಬೇಕು. ತಾಲೂಕು ಕೇಂದ್ರ ವಿರಾಜಪೇಟೆ 16 ಕಿ.ಮೀ ದೂರದಲ್ಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಗುಹ್ಯ, ಕರಡಿಗೋಡು, ಸಿದ್ದಾಪುರ ಎಂಬ 3 ಗ್ರಾಮಗಳಿದ್ದು, ಚಿಕ್ಕನಹಳ್ಳಿ ಎಂಬ ಉಪ ಗ್ರಾಮವಿದೆ. ಈ ಭಾಗದ ಜನರು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಪ್ರಖ್ಯಾತ ಆರೇಂಜ್ ಕೌಂಟಿ ರೆರ್ಸಾಟ್ ಇದ್ದು, ಇದು ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಪಡೆದಿದೆ. ಗುಹ್ಯ ಗ್ರಾಮದಲ್ಲಿ ಐತಿಹಾಸಿಕ ಅಗಸ್ತೇಶ್ವರ ದೇವಸ್ಥಾನ ಇದೆ.