ಕಾರವಾರ: ಸಿದ್ದಾಪುರದ ಬಿಳಗಿ ಹಾಗೂ ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸ್ಟಾಫ್ ನರ್ಸ್ಗಳನ್ನು ನೇಮಕ ಮಾಡುವಂತೆ ಹಾಗೂ ಸಿದ್ದಾಪುರ ತಾಲೂಕು ಆಸ್ಪತ್ರೆಗೆ ಸ್ಕ್ಯಾನಿಂಗ್ ಯಂತ್ರ ಅಳವಡಿಸುವಂತೆ ಸ್ಥಳೀಯರು ಡಿಎಚ್‌ಒ ಡಾ. ನೀರಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಬಿಳಗಿ, ದೊಡ್ಮನೆ ಹಾಗೂ ತಾಲೂಕಿನ ವಿವಿಧೆಡೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ನರ್ಸ್ಗಳ ಸಮಸ್ಯೆ ಇತ್ತು. ಈ ಬಗ್ಗೆ ಸಚಿವರು ಹಾಗೂ ಅಽಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಕಳೆದ ಒಂದು ವಾರದಿಂದ ಬಿಳಗಿ ಹಾಗೂ ದೊಡ್ಮನೆ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಲಾಗಿದೆ. ಆದರೆ ವೈದ್ಯರಿಗೆ ಪೂರಕವಾಗಿ ಕೆಲಸ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಟಾಫ್ ನರ್ಸ್ಗಳು ಇಲ್ಲ. ಇದರಿಂದ ಬಂದ ವೈದ್ಯರಿಗೂ ಹಾಗೂ ಜನರಿಗೆ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಈವರೆಗೂ ಸ್ಕ್ಯಾನಿಂಗ್ ಯಂತ್ರವಿಲ್ಲ. ಇದರಿಂದ ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರು ದೂರದ ಸಾಗರಕ್ಕೆ ಸ್ಕಾ÷್ಯನಿಂಗ್‌ಗೆ ತೆರಳಬೇಕಾಗಿದೆ. ಇದರಿಂದ ರೋಗಿಗಳಿಗೂ ತೊಂದರೆಯಾಗಲಿದ್ದು, ವೈದ್ಯರಿಗೂ ತಕ್ಷಣ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ವಿವರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಎನ್. ನಾಯ್ಕ ಬೇಡ್ಕಣಿ, ದೊಡ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಸಂತ ಹೆಗಡೆ ಹಳ್ಳಿಬೈಲ್ ಇದ್ದರು.