ಸಿದ್ದಾಪುರ: ತುಂಗಭದ್ರಾ ಜಲಾಶಯದಿಂದ ಗುರುವಾರ ಸಂಜೆ ಬರೋಬ್ಬರಿ 1.30 ಕ್ಯೂಸೆಕ್ ನೀರು ನದಿಗೆ ಬಿಟ್ಟಿರುವುದರಿಂದ ಹೋಬಳಿ ವ್ಯಾಪ್ತಿಯ ಬೆನ್ನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ.
ನಿರಂತರ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ ಕಾರಣ ಡ್ಯಾಂ ನಿಂದ ನೀರು ಹೊರಬಿಡಲಾಗಿದೆ. ಇದರಿಂದ ನದಿ ಪಾತ್ರದ ಜಮಾಪುರ, ಕಕ್ಕರಗೋಳ, ನಂದಿಹಳ್ಳಿ ಸೇರಿ ಇತರ ಗ್ರಾಮಗಳ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಇದರಿಂದ ನಾಟಿ ಮಾಡಿರುವ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಇದಲ್ಲದೇ ಗ್ರಾಮೀಣ ಭಾಗದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆನ್ನೂರು ಇತರ ಗ್ರಾಮಗಳಲ್ಲಿ ನದಿ ದಡದಲ್ಲಿನ ಕೃಷಿ ಮೋಟಾರ್‌ಗಳನ್ನು ರೈತರು ಮುಂಜಾಗ್ರತೆ ಕ್ರಮವಾಗಿ ಬೇರ್ಪಡಿಸಿ ಇಡುತ್ತಿದ್ದಾರೆ.
ಈಗಾಗಲೇ ಭತ್ತದ ಬೆಳೆ ನಿರ್ವಹಣೆಗೆ ರಸಗೊಬ್ಬರ ಸಿಂಪಡನೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂ. ವ್ಯಯಿಸಿದ್ದು, ಈಗ ನೀರು ನುಗ್ಗಿರುವುದರಿಂದ ರೈತರು ಕೊಂಚ ಕಸಿವಿಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾದರೆ ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗಲಿದೆ.