ಸಿದ್ದಾಪುರ: ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಮಳೆ ಸರುಯುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆಗೆ ರೋಗ ಭೀತಿ ಎದುರಾಗಿದ್ದು, ರೈತರಿಗೆ ಸಂಕಷ್ಟ ತಂದೊಡಿದೆ.
ಅನೇಕ ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಏಕಾಏಕಿ ಮಳೆ ಸುರಿಯುತ್ತಿದ್ದು, ಇದರಿಂದ ಭತ್ತದ ಬೆಳೆಗೆ ಸೂಕ್ತ ಬಿಸಿಲು ದೊರೆಯದೆ ಬೆಳೆಗಳು ರೋಗಕ್ಕೆ ತುತ್ತಾಗುತ್ತಿವೆ. ಈಗಾಗಲೇ ಹೋಬಳಿಯ ಗುಂಡೂರು, ಸಿಂಗನಾಳ, ಬರಗೂರು, ಉಳೇನೂರು, ಈಳಿಗನೂರು, ನಂದಿಹಳ್ಳಿ ಹಾಗೂ ತಾಲೂಕಿನ ವಿವಿಧೆಡೆ ಭತ್ತದ ಬೆಳೆಗೆ ದುಂಡಾಣು ಎಲೆ ಅಂಗಮಾರಿ ರೋಗ ಸೇರಿ ಇತರ ರೋಗಗಳು ಕಾಣಿಸಿಕೊಳ್ಳುತ್ತಿವೆ. ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ 13ಸಾವಿರ ಹೇಕ್ಟರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಇದರ ಜತೆಗೆ ಕೆಲ ಗ್ರಾಮಗಳ ಖುಷ್ಕಿ ಜಮೀನಿನಲ್ಲಿ ಸೂರ್ಯಕಾಂತಿ, ಮೆಕ್ಕೆಜೋಳ, ತೋಗರಿ ಬೆಳೆ ಬೆಳೆಯಲಾಗಿದೆ. ನಿರಂತರ ಮಳೆಯಿಂದ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ಕಟಾವು ಹಂತಕ್ಕೆ ಬಂದ ಬೆಳೆಗಳ ಬಗ್ಗೆ ಅನ್ನದಾತರು ಚಿಂತೆಗೀಡಗಿದ್ದಾರೆ.
ಭತ್ತದ ಬೆಳೆಗೆ ಕಾಣಿಸಿಕೊಳ್ಳುತ್ತಿರುವ ದುಂಡಾಣು ಎಲೆ ಅಂಗಮಾರಿ ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆ ಮುಂದಾಗಿದೆ. ರೋಗ ಉಲ್ಬಣವಾದರೆ ಭತ್ತದ ಶೇ.10 ಇಳುವರಿ ಕುಸಿತ ಕಾಣುವ ಸಾಧ್ಯತೆಯಿದೆ. ಈಗಾಗಲೇ ರೈತರಿಗೆ ರೋಗ ನಿಯಂತ್ರಣ ಸಂಬಂಧ ಜಾಗೃತಿ ಮೂಡಿಸುವ ಜತೆಗೆ ಯಾವ ಕ್ರಿಮಿನಾಶಕ ಬಳಕೆ ಮಾಡಿದರೆ ರೋಗ ಹತೋಟಿಗೆ ಬರುತ್ತದೆ ಎನ್ನುವುದರ ಬಗ್ಗೆ ಸಲಹೆ ನೀಡುತ್ತಿದ್ದಾರೆ. ಭತ್ತದ ಬೆಳೆಗೆ ಗರಿ ಎಲೆ ರೋಗ, ಕಾಂಡ ಕೋರಕ, ಎಲೆ ಸುರಳಿ ರೋಗ ಸೇರಿ ಇತರ ರೋಗಗಳು ಕಾಣಿಸಿಕೊಂಡರೆ ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳ ಹತ್ತಿರ ಸಲಹೆ ಪಡೆಯಬಹುದು.
ಕಾರಟಗಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆಗೆ ನಾನಾ ರೋಗ ಕಂಡು ಬರುತ್ತಿರುವುದು ಗಮನಕ್ಕಿದೆ. ಈ ಸಂಬಂಧ ಕೆವಿಕೆ ವಿಜ್ಞಾನಿಗಳ ತಂಡ ರಚಿಸಲಾಗಿದೆ. ಆ ತಂಡ ಯಾವ ಜಮೀನಿನಲ್ಲಿ ರೋಗ ಕಾಣಿಸಿಕೊಳ್ಳುತ್ತದೆ, ಅಲ್ಲಿಗೆ ತೆರಳಿ ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ. ರೈತರಿಗೆ ಕೃಷಿ ಇಲಾಖೆಯಿಂದ ರೋಗ ಹತೋಟಿಗೆ ಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. | ರುದ್ರೇಶಪ್ಪ ಕೃಷಿ ಇಲಾಖೆ ಜೆ.ಡಿ, ಕೊಪ್ಪಳ