ಸಿದ್ದಾಪುರ: ಸಮೀಪದ ಮುಸ್ಟೂರು ಗ್ರಾಪಂನಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಂಗಳವಾರ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ನಾನಾ ಸಮಸ್ಯೆ ಪರಿಹಾರಿಸುವಂತೆ ಸಿಇಒರನ್ನು ಆಗ್ರಹಿಸಿದರು. ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕವಿದ್ದರೂ ತ್ಯಾಜ್ಯ ವಿಂಗಡನೆ ಆಗುತ್ತಿಲ್ಲ. ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದರೂ ನಿಯಂತ್ರಣವಿಲ್ಲದಂತಾಗಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಮಹಿಳೆಯರಿಗೆ ಕಸ ವಿಗಂಡನೆ ಬಗ್ಗೆ ಇನ್ನೂ ತರಬೇತಿ ಆಗಿಲ್ಲ. ಗ್ರಾಪಂ ಸಭೆಯಲ್ಲಿ ಠಾರಾವು ಪಾಸ್ ಮಾಡಿ ನಮಗೆ ಕಳುಹಿಸಿ ಎಂದರು. ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಗ್ರಾಪಂನಿಂದ ಹಣ ನೀಡುತ್ತಿಲ್ಲ. ಗ್ರಾಮದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗುತ್ತಿಲ್ಲ. ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಶೌಚಗೃಹ ವ್ಯವಸ್ಥೆಯಿಲ್ಲ. ಸ್ಮಶಾನ ಭೂಮಿ ಅಭಿವೃದ್ಧಿಗೆ ಜಿಪಂನಿಂದ 50 ಲಕ್ಷ ರೂ. ನೀಡಬೇಕು. ಕೆಲವರು ಗ್ರಾಪಂ ಕಾಮಗಾರಿಗಳಿಗೆ ಬಿಲ್ ಪಡೆಯಲು ನಾಲ್ಕೈದು ದಿನಗಳ ಕಾಲ ಬೇರೆ ಗ್ರಾಪಂ ಪಿಡಿಒಗಳಿಗೆ ಪ್ರಭಾರವಹಿಸಿ ಬಿಲ್ ಮಾಡಿದ ಬಳಿಕ ಅವರನ್ನು ಮತ್ತೆ ಹಿಂಪಡೆಯುತ್ತಾರೆ ಎಂದು ತಾಪಂ ಇಒ ಲಕ್ಷ್ಮೀದೇವಿ ವಿರುದ್ಧ ಸದಸ್ಯರು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಇಒ, ನರೇಗಾದಡಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬರುವುದಿಲ್ಲ. 15ನೇ ಹಣಕಾಸು ಬಳಕೆಗೆ ಗ್ರಾಪಂ ಮಟ್ಟದಲ್ಲಿಯೇ ಬಿಲ್ ಮಾಡಿಕೊಳ್ಳಬಹುದು. ಸಮಸ್ಯೆಗಳಿದ್ದರೆ ಗ್ರಾಪಂ ಸಭೆ ನಡೆಸಿ ಪರಿಹರಿಸಿಕೊಳ್ಳಿ. ದನದ ದೊಡ್ಡಿ ನಿರ್ಮಾಣಕ್ಕೆ ಅನುದಾನ ನೀಡುತ್ತೇವೆ ಎಂದರು.
ಪಿಡಿಒ ಗ್ರಾಮದ ಅಭಿವೃದ್ಧಿಯ ಕೆಲ ವಿಚಾರಗಳಿಗೆ ಸ್ಪಂದಿಸುವುದಿಲ್ಲ ಎಂದು ಗ್ರಾಪಂ ಸದಸ್ಯರು ದೂರಿದರು. ಕೆಲ ಕಾಮಗಾರಿ ವಿಚಾರಗಳಿಗೆ ಬಿಲ್ ಮಾಡಲು ಗೊಂದಲವಿದ್ದರೆ, ಥರ್ಡ್ ಪಾರ್ಟಿ ವರದಿ ಪಡೆದು ಬಿಲ್ ಮಾಡಿ ಎಂದು ಜಿಪಂ ಸಿಇಒ ಪಿಡಿಒಗಳಿಗೆ ಸಲಹೆ ನೀಡಿದರು. ಬಳಿಕ ಗ್ರಾಮದ ಆಸ್ಪತ್ರೆ, ಶೌಚಗೃಹ, ರಸ್ತೆ, ಅಂಗನವಾಡಿ ಇತರ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ಲಕ್ಷ್ಮೀದೇವಿ, ಎಡಿಗಳಾದ ಕನಕಪ್ಪ, ವನಜಾ, ಸಿಡಿಪಿಒಳಾದ ಜಯಶ್ರೀ, ವಿರೂಪಾಕ್ಷಿ, ಪಿಆರ್ ಇಡಿ ಎಇಇ ವಿಜಯ ಕುಮಾರ್, ಅರಣ್ಯ ಇಲಾಖೆ ಅಧಿಕಾರಿ ಸುಭಾಷ್‌ಚಂದ್ರ ಇತರ ಇಲಾಖೆ ಅಧಿಕಾರಿಗಳಿದ್ದರು.
ತಾಪಂ ಇಒ ಲಕ್ಷ್ಮೀದೇವಿ ವಿರುದ್ಧ ಗ್ರಾಪಂ ಮಾಜಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಗೆ ಮರಂ ಹಾಕಿಸುವ ಸಂಬಂಧ ನಾನು ಖುದ್ದು ಸಚಿವರಿಂದ ಇಒಗೆಕರೆ ಮಾಡಿಸಿದ್ದೇನೆ ಆದರೂ, ಕೆಲಸವಾಗಿಲ್ಲ. ಅನೇಕರಿಗೆ ಮನೆ ಜಿಪಿಎಸ್ ಮಾಡಿಲ್ಲ. ಇಂತಹ ಹತ್ತಾರು ಸಮಸ್ಯೆಗಳಿವೆ ಎಂದು ಮಾಜಿ ಸದಸ್ಯರೊಬ್ಬರು ಅಸಮಾಧಾನ ತೋಡಿಕೊಂಡರು. ಮತ್ತೊಬ್ಬರು ಮಾತನಾಡಿ, ಇಒ ನಾಲ್ಕೈದು ಬಾರಿ ಕರೆ ಮಾಡಿದರೂ ಸ್ವೀಕರಿಸಲ್ಲ. ಗ್ರಾಪಂಗಳಿಗೆ ತಿಂಗಳಿಗೆ ಒಮ್ಮೆಯೂ ಭೇಟಿ ನೀಡೋಲ್ಲ. ತಾಪಂನಿಂದ ಗ್ರಾಪಂಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ದೂರಿದರು. ಇದಕ್ಕೆ ಸಿಇಒ ಪ್ರತಿಕ್ರಿಯಿಸಿ, ಎಲ್ಲ ಗ್ರಾಪಂಗಳಿಗೂ ಭೇಟಿ ನೀಡುತ್ತಿದ್ದಾರೆ. ಮರಂ ಹಾಕಿಸುವ ಕಾಮಗಾರಿ ತಾಪಂ ಕ್ರಿಯಾ ಯೋಜನೆಯಲ್ಲಿ ಇರಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ತಾಪಂ ಅನಿಬರ್ಂಧಿತ ಅನುದಾನ ಬಂದಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಪ್ರತಿ ಗ್ರಾಪಂಗೆ ಕಡಿಮೆ ಅನುದಾನ ಬಂದಿದ್ದು, ಇದ್ದ ಅನುದಾನದಲ್ಲಿ ಅನೇಕ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಮುಸ್ಟೂರು ಗ್ರಾಪಂನಲ್ಲಿ ಶೌಚಗೃಹ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರನ್ನುಒತ್ತಾಯಿಸಿದರು.