ಜಿಲ್ಲೆ

ಗಿಡ ನೆಡುವ ಸಂಸ್ಕೃತಿ ಮುಂದುವರಿಯಲಿ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸಿದ್ದಾಪುರ: ಮನುಷ್ಯ ತನ್ನ ಅವಶ್ಯಕತೆಗಾಗಿ ಕಾಡು ನಾಶ ಮಾಡಿರುವುದರಿಂದ ಇಂದು ಗಿಡ ನೆಡುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಂಡಿರುವುದು ಉತ್ತಮ ಸಂಸ್ಕೃತಿ. ಮಲೆನಾಡಿನ ಬದುಕು ಮರಗಳ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಮರ-ಗಿಡಗಳು ತಾಯ್ತನದ ಸ್ಥಾನದಲ್ಲಿವೆ. ಇಂದಿನ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ ಪ್ರಶಂಸೆಗೆ ಅರ್ಹವಾಗಿದೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ತಾಲೂಕಿನ ಶಿರಳಗಿ ಗ್ರಾಪಂನಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ನಮಗೆ ಅರಿವಿಲ್ಲದೆಯೇ ಅಸಂಖ್ಯ ಮರಗಳನ್ನು ಕಡಿದಿದ್ದೇವೆ. ಮಲೆನಾಡಿನಲ್ಲಿ ಬೆಳೆದವರಿಗೆ ಕಾಡಿನ ಅರ್ಥ ಗೊತ್ತು. ಸಾಂಸಾರಿಕ ಬದುಕು ಗೊತ್ತು. ಅರಣ್ಯ ಭೂಮಿ ಹಕ್ಕಿನೊಂದಿಗೆ, ಪರಿಸರ ಜಾಗೃತೆ ಹಮ್ಮಿಕೊಂಡಿರುವುದು ಹೋರಾಟಗಾರರ ವೇದಿಕೆ ಕಾರ್ಯ ಶ್ಲಾಘನೀಯ ಎಂದರು. ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಜಿಲ್ಲೆಯ 101 ಗ್ರಾಪಂಗಳ 400ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಒಂದು ಲಕ್ಷ ಗಿಡ ನೆಡುವ ಐತಿಹಾಸಿಕ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಆ. 14ರವರೆಗೆ ಅಭಿಯಾನ ನಡೆಯಲಿದೆ. ಪ್ರತಿ ಕುಟುಂಬ 10 ರಿಂದ 50 ಗಿಡ ನೆಡಬೇಕು ಎನ್ನುವ ಉದ್ದೇಶ ನಮ್ಮದು ಎಂದರು. ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ ನಾಯ್ಕ ಸಂಪಖಂಡ, ರಾಘವೇಂದ್ರ ನಾಯ್ಕ ಕವಂಚೂರು, ನಾಗರಾಜ ಮರಾಠಿ ಕೋಡಿಗದ್ದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ರವಿ ನಾಯ್ಕ ಹಂಜಗಿ, ಜಗದೀಶ ಬಿಕ್ಕಳಸಿ, ಭಾಸ್ಕರ ಮುಗದೂರು, ಬಿ.ಡಿ. ನಾಯ್ಕ, ಜೈವಂತ ಕಾನಗೋಡ, ವಿ.ಎನ್. ನಾಯ್ಕ ಬೇಡ್ಕಣಿ, ಮಾದೇವ ಹಿರೇಮಕ್ಕಿ, ಅಣ್ಣಪ್ಪ ನಾಯ್ಕ, ಸುಧಾಕರ ಮಡಿವಾಳ ಬಿಳಗಿ ಇತರರಿದ್ದರು.