ಸಿದ್ದಾಪುರ: ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡು ಗ್ರಾಮದಲ್ಲಿ ಒತ್ತುವರಿಯಾಗಿದ್ದ ೫೦ ಸೆಂಟ್ ಜಾಗ ತೆರವುಗೊಳಿಸಿ ಗ್ರಾಮದ ಸ್ಮಶಾನಕ್ಕೆ ನೀಡಲಾಯಿತು.
ಸಾರ್ವಜನಿಕ ಸ್ಮಶಾನ ಇಲ್ಲದರಿಂದ ಗ್ರಾಮಸ್ಥರು ನದಿ ದಡದಲ್ಲಿ ಶವ ಸಂಸ್ಕಾರ ನೆರವೇರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮಕ್ಕೆ ಸ್ಮಶಾನಕ್ಕಾಗಿ ಜಾಗ ಒದಗಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಜಿಲ್ಲಾಳಿತವು ಒತ್ತುವರಿಯಾಗಿದ್ದ ಜಾಗ ತೆರವುಗೊಲಿಸಿ, ಸಾರ್ವಜನಿಕ ಸ್ಮಶಾನ ನಿರ್ಮಿಸಲು ಹೊಸ್ಕೇರಿ ಗ್ರಾಮ ಪಂಚಾಯಿತಿಗೆ ವಹಿಸಿದೆ.
ಅರೆಕಾಡು ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಐದಾರು ಕಿ.ಮೀ ದೂರದ ಕಾವೇರಿ ನದಿ ದಡದಲ್ಲಿ ಶವ ಸಂಸ್ಕಾರ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾವೇರಿ ನದಿ ದಡದಲ್ಲಿ ಶವ ಸಂಸ್ಕಾರ ನಿಷೇಧಿಸಿರುವುದರಿಂದ ಶವ ಸಂಸ್ಕಾರಕ್ಕೆ ತೊಡಕಾಗಿತ್ತು.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್ ನೇತೃತ್ವದಲ್ಲಿ ಬುಧವಾರ ಕಂದಾಯ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿದರು. ಹೊಸ್ಕೇರಿ ಗ್ರಾಪಂ ಅಧ್ಯಕ್ಷ ಬಿ.ವೈ. ಪ್ರಭು ಶೇಖರ್, ಉಪಾಧ್ಯಕ್ಷೆ ಪಧ್ಮಾವತಿ, ಸದಸ್ಯರಾದ ಚಿದಂಬರಂ, ಯೂಸುಫ್, ಜನಾರ್ದನ, ಉಷಾ ತಂಗಮ್ಮ, ಕವಿತಾ ಬೆಳ್ಯಪ್ಪ, ಮಮತಾ, ಪಾರ್ವತಿ, ಪಿಡಿಓ ಅಂಜನ್‌ಮೂರ್ತಿ, ಗ್ರಾಮ ಲೆಕ್ಕಿಗ ರಂಜನ್ , ತಾಪಂ ಮಾಜಿ ಉಪಾಧ್ಯಕ್ಷ ಬಿ.ವೈ. ರಘು ಆನಂದ, ಮಾಜಿ ಸದಸ್ಯ ಬಿ.ವೈ. ಅಪ್ರು ರವೀಂದ್ರ ಮತ್ತಿತರರು ಇದ್ದರು.