ಜಿಲ್ಲೆ

ಸಮಾಜದಲ್ಲಿ ಹಾಲುಮತ-ಕಂಬಳಿಗೆ ವಿಶೇಷ ಸ್ಥಾನ; ಹಾಲವರ್ತಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಅಭಿಮತ

ಸಿದ್ದಾಪುರ: ‘ಹಾಲುಮತ’ ನಂಬಿಕಸ್ಥ ಸಮುದಾಯವೆಂದು ಸಮಾಜವೇ ಒಪ್ಪಿಕೊಂಡಿದೆ ಎಂದು ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‌ನ ಶಾಖಾ ಮಠ ಬಾದಿಮನಾಳ ಹಾಲವರ್ತಿಯ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಿದ್ದಾಪುರದಲ್ಲಿ ಕೊನೆಯ ಶ್ರಾವಣ ಶನಿವಾರದ ನಿಮಿತ್ತ ಹಮ್ಮಿಕೊಂಡಿದ್ದ ಹಾಲುಮತ ಧರ್ಮ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುರುಬ ಸಮುದಾಯ ಹಾಗೂ ಕಂಬಳಿಗೆ ಸಮಾಜದಲ್ಲಿ ವಿಶೇಷ ಸ್ಥಾನವಿದೆ. ಸಮುದಾಯದಲ್ಲಿ ಅನೇಕ ಸಂತ, ಶರಣರು ಜನಿಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲಿ ಏನೇ ಕಾರ್ಯಕ್ರಮ ನಡೆದರೂ ಕುರುಬರಿಗೆ ಹಾಗೂ ಕಂಬಳಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಇಂತಹ ಸಮುದಾಯದಲ್ಲಿ ಜನಿಸಿದ ನಾವುಗಳೇ ಪುಣ್ಯವಂತರು. ಪ್ರತಿಯೊಬ್ಬರೂ ಹಾಲುಮತ ಸಮುದಾಯದ ಇತಿಹಾಸ , ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು ಎಂದರು.

ಬೆಳಗ್ಗೆ ಕುಂಭ ಕಳಶ ಹಾಗೂ ಡೊಳ್ಳು ಕುಣಿತಗಳೊಂದಿಗೆ ಸಾರೋಟದಲ್ಲಿ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸಾಪಟ್ಟಣದ ನಂಜುಂಡೇಶ್ವರ ಮಠದ ಸಿದ್ದರಾಮಯ್ಯರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವೇದಿಕೆಗೆ ಕರೆತರಲಾಯಿತು.

ಹಿರೇಮಠದ ಉಮೇಶ್ ತಾತ, ಮಾಜಿ ಸಚಿವ ನಾಗಪ್ಪ ಸಾಲೋಣಿ, ಸಮುದಾಯದ ಈರಪ್ಪ ಗುಂಡೂರು, ಜನಗಂಡೆಪ್ಪ ಪೂಜಾರಿ, ರಾಮಣ್ಣ, ರಾರಾಯಪ್ಪ, ಸೂರ್ಯಕಾಂತ ಬಗ್ಗಾರ್, ಗೋವಿಂದಪ್ಪ, ಅಯ್ಯಪ್ಪ, ಹನುಮಂತಪ್ಪ ಇತರರಿದ್ದರು.