ಜಿಲ್ಲೆ

ಬಿಜೆಪಿಗೆ ಒತ್ತೆಯಾದ ಜೆಡಿಎಸ್ ಮರೆಯಾಗಲಿದೆ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಸಿದ್ದಾಪುರ: ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎಚ್.ಡಿ. ದೇವೇಗೌಡ ಅವರು ಜನತಾ ದಳವನ್ನ ಬಲಿಷ್ಠವಾಗಿ ಕಟ್ಟಿದ್ದರು. ಆದರೆ, ಈಗ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಒತ್ತೆಯಾಗಿಟ್ಟಿದ್ದಾರೆ. ಚುನಾವಣೆ ಬಳಿಕ ಜೆಡಿಎಸ್ ನಿರ್ನಾಮ ಆಗುವ ಲಕ್ಷಣಗಳಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ತಾಲೂಕಿನ ಅಣಲೆಬೈಲ್ ಹಾಗೂ ದೊಡ್ಮನೆ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ರಾಜಕೀಯಕ್ಕೆ ಹೊಸಬರೇನಲ್ಲ. ಖಾನಾಪುರದಲ್ಲಿ ಶಾಸಕಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿ ಲೋಕಸಭೆಗೆ ಆಯ್ಕೆ ಮಾಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಯುಗ ಪ್ರಾರಂಭವಾಗಿದೆ. ವರ್ಷಕ್ಕೆ 60 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಳಿಗೆ ಸರ್ಕಾರ ವಿನಿಯೋಗಿಸುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕಾಮಧೇನು ಆಗಿವೆ. ಶಿರಸಿಗೆ ಬಂದರೂ ಮೋದಿ ಅವರಿಗೆ ಅರಣ್ಯ ಹಕ್ಕಿನ ಬಗ್ಗೆ ಪರಿಹಾರ ಕಂಡುಹಿಡಿಯಲು ಆಗಲಿಲ್ಲ ಎಂದರು.
ಶಾಸಕ ಭೀಮಣ್ಣ ನಾಯ್ಕ, ಕಳೆದ 30 ವರ್ಷಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಸುಳ್ಳು ಭರವಸೆ ನೀಡುವುದೇ ಬಿಜೆಪಿ ಕೆಲಸ. ಹಿಂದಿನ ಬಿಜೆಪಿ ಸರ್ಕಾರ ಬಾಕಿ ಇಟ್ಟಿದ್ದ ಬಿಲ್‌ಗಳನ್ನ ನಮ್ಮ ಸರ್ಕಾರ ಭರಿಸುತ್ತಿದೆ. ಕಾಂಗ್ರೆಸ್ ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ ಎಂದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ಹಳ್ಳಿಯ ಸಮಸ್ಯೆಗಳನ್ನ ದಿಲ್ಲಿಗೆ ಒಯ್ಯಲು ಮತ ನೀಡುವ ಮೂಲಕ ನನಗೆ ಆಶೀರ್ವಾದ ಮಾಡಬೇಕು. 10 ವರ್ಷದಲ್ಲಿ ಸಿದ್ದಾಪುರಕ್ಕೆ ಬಿಜೆಪಿ ಸರ್ಕಾರ ಏನು ಕೊಡುಗೆ ನೀಡಿದೆ? ಕಾಗೇರಿ ಶಿಕ್ಷಣ ಸಚಿವರಾಗಿದ್ದಾಗ ಖಾನಾಪುರದ ಎರಡು ಶಾಲೆ ರದ್ದು ಮಾಡಿದ್ದಾರೆ. ನಾನು 500 ಶಾಲಾ ಕೊಠಡಿ ಕಟ್ಟಿಸಿದ್ದೇನೆ. ಬಡವರ ಪರ ಕಾಳಜಿ ಇವರಿಗಿಲ್ಲ. ರಾಮನ ವನವಾಸ 14 ವರ್ಷ ಇತ್ತು. ಉತ್ತರ ಕನ್ನಡ ಅಭಿವೃದ್ಧಿ ವಿಷಯದಲ್ಲಿ 30 ವರ್ಷದಿಂದ ವನವಾಸ ಅನುಭವಿಸುತ್ತಿದೆ. ಇದು ಈ ಬಾರಿ ಕೊನೆಯಾಗಬೇಕು. ಇಲ್ಲಿ ರೈತ ಧರ್ಮ ಸ್ಥಾಪನೆಯಾಗಬೇಕು ಎಂದರು.
ಮುಸ್ಲಿಂ ಸಮುದಾಯದ ಮಹಿಳೆಯರು ಹಾಗೂ ಬಿಳಗಿ ಘಟಕದಿಂದ ಡಾ. ಅಂಜಲಿ ಅವರನ್ನು ಸನ್ಮಾನಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ, ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಬಿ.ಆರ್.ನಾಯ್ಕ, ಸುಬ್ರಾಯ ಭಟ್, ಅಬ್ಬಾಸ್ ತೋನ್ಸೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಇಂದಿರಾ ನಾಯ್ಕ, ಆರ್.ಎಂ. ಹೆಗಡೆ, ನಾಗರಾಜ, ವಿ.ಎನ್. ನಾಯ್ಕ ಇತರರಿದ್ದರು.
ಡೋಲು ತಂಡದೊಂದಿಗೆ ಹೆಜ್ಜೆ ಹಾಕಿದ ಡಾ. ಅಂಜಲಿ: ದೊಡ್ಮನೆ ಜಿಪಂ ಕ್ಷೇತ್ರದ ಬಿಳಗಿಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಡೊಳ್ಳು ಕುಣಿತದ ಮೂಲಕ ಸ್ವಾಗತ ಕೋರಲಾಯಿತು. ಈ ವೇಳೆ ಕ್ಯಾದಗಿ ಭೂತೇಶ್ವರ ಯುವತಿ ಸಂಘದ ಡೊಳ್ಳಿನ ಕುಣಿತದವರೊಂದಿಗೆ ಅಂಜಲಿ ಅವರು ಹೆಜ್ಜೆ ಹಾಕಿದರು.