ಹುಬ್ಬಳ್ಳಿ: ತಾಲೂಕಿನ ಅಮರಗೋಳ ಗ್ರಾಮದ ಅಧ್ಯಾಪಕನಗರದಲ್ಲಿರುವ ಶ್ರೀ ಸದ್ಗುರು ಸಿದ್ದಪ್ಪಜ್ಜನವರ ಮಠದಲ್ಲಿ ಸಿದ್ದಪ್ಪಜ್ಜನವರ 164ನೇ ಜಯಂತ್ಯುತ್ಸವ ಅಂಗವಾಗಿ ಜಾತ್ರಾ ಮಹೋತ್ಸವ ಡಿ. 16ರಿಂದ 20ರ ವರೆಗೆ ಐದು ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದ 12ನೇ ವಾಷಿರ್ಕೋತ್ಸವ ಹಾಗೂ ತೊಟ್ಟಿಲೋತ್ಸವ, 9ನೇ ಮಹಾರಥೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ. ಜಾತ್ರೆ ಅಂಗವಾಗಿ ನಿತ್ಯ ಸಂಜೆ 7ಕ್ಕೆ ಶಿವಾನುಭವ ಪ್ರವಚನಗಳನ್ನು ಏರ್ಪಡಿಸಲಾಗಿದೆ.
ಮಣಕವಾಡದ ಶ್ರೀಅನ್ನದಾನೇಶ್ವರ ದೇವ ಮಂದಿರ ಮಹಾಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ನಿತ್ಯ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು.
ತಾಳಿಕೋಟಿ ಶ್ರೀ ಖಾಸ್ಗತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು, ದೇವರ ಹುಬ್ಬಳ್ಳಿ ಸಿದ್ದಾಶ್ರಮದ ಶ್ರೀ ಸಿದ್ಧ ಶಿವಯೋಗಿಗಳು, ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಹಿಪ್ಪರಗಿಯ ಶ್ರೀ ಪ್ರಭುಜಿ ಮಹಾರಾಜರು, ಅಮ್ಮಿನಬಾವಿಯ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಧಾಮಿರ್ಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
ಡಿ. 16ರಂದು ಸಂಜೆ 7ಕ್ಕೆ ಶಿವಾನುಭವ ಪ್ರವಚನವನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಉದ್ಘಾಟಿಸುವರು. ಡಿ. 20ರಂದು ಬೆಳಗ್ಗೆ ಶ್ರೀ ಸಿದ್ದಪ್ಪಜ್ಜನವರಿಗೆ ಅಭಿಷೇಕ, ತೊಟ್ಟಿಲೋತ್ಸವ ಹಾಗೂ ವಿವಿಧ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 12ಕ್ಕೆ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದೊಂದಿಗೆ ಸಿದ್ದಪ್ಪಜ್ಜನವರ ಉತ್ಸವ ಮೂತಿರ್ ಮೆರವಣಿಗೆಯು ಭಜನೆ, ಮಂಗಲ ವಾದ್ಯಮೇಳಗಳೊಂದಿಗೆ ನಡೆಯಲಿವೆ. ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗುವುದು. ಭಕ್ತರಿಗೆ ನಿತ್ಯವೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಸದ್ಭಕ್ತ ಮಂಡಳಿ ಅಧ್ಯಕ್ಷ ಕಲ್ಲನಗೌಡ ಪಾಟೀಲ ತಿಳಿಸಿದ್ದಾರೆ.