ಸಾಲಿಗ್ರಾಮ: ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರ ಸಂಘಗಳ ಬಲವರ್ಧನೆಗೆ ಮುಂದಾದ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರದಿಂದ ಆಚರಿಸಬೇಕು ಎಂದು ಚಿಬುಕಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಒತ್ತಾಯಿಸಿದರು.
ಚಿಬುಕಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ 182ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿದ್ದನಗೌಡ ಪಾಟೀಲ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹಕಾರ ಸಂಘಗಳ ರಚನೆಗೆ ಮುಂದಾಗಿದ್ದ ಅವರು ಸಹಕಾರ ಕ್ಷೇತ್ರಗಳ ಅಭಿವೃದ್ಧಿಗೆ ಮುನ್ನುಡಿ ಬರೆದಂತಹ ನಮ್ಮೆಲ್ಲರ ಆರಾಧ್ಯ ದೈವ. ಸಹಕಾರ ಸಂಘಗಳು ಇಲ್ಲದಿದ್ದರೆ ರೈತರ ಬದುಕು ನರಕವಾಗುತ್ತಿತ್ತು. ಸಂಘಗಳಿಂದ ಸಿಗುವ ಸೌಲಭ್ಯಗಳಿಂದ ರೈತರು ಕೃಷಿಯಲ್ಲಿ ಸಾಧನೆ ಮಾಡಲು ಸಹಕಾರವಾಗಿದೆ. ಅಂತಹ ಸಂಘಗಳನ್ನು ಸ್ಥಾಪಿಸಿ ಕೊಟ್ಟಂತಹ ರೈತ ನಾಯಕ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ ಜನ್ಮ ದಿನಾಚರಣೆಯನ್ನು ಪ್ರತಿ ಸಹಕಾರ ಸಂಘಗಳಲ್ಲಿ ಮತ್ತು ಸಹಕಾರ ಕ್ಷೇತ್ರಗಳಲ್ಲಿ ಆಚರಿಸಬೇಕು ಎಂದರು.
ಸರ್ಕಾರ ಕೂಡಲೇ ಇಂತಹ ಮಹಾನ್ ನಾಯಕರ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡುವ ಆದೇಶವನ್ನು ಹೊರಡಿಸಬೇಕು. ಆ ದಿನ ಸಹಕಾರ ಸಂಘಗಳು ಮತ್ತು ಸಹಕಾರ ಕ್ಷೇತ್ರಗಳ ಸೌಲಭ್ಯಗಳ ಬಗ್ಗೆ ರೈತರಿಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವಂತಹ ವಿಶೇಷ ಕಾರ್ಯಕ್ರಮಗಳನ್ನು ಮಾಡುವಂತಹ ಆಗಬೇಕು ಎಂದರು.
ಇದಕ್ಕೂ ಮೊದಲು ಸಹಕಾರ ಸಂಘದ ಕಚೇರಿಯಲ್ಲಿ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿ ಪುಷ್ಪಾರ್ಚನೆ ಮಾಡಿದರು. ಅವರ ಆದರ್ಶ ಗುಣಗಳನ್ನು ಮತ್ತು ಅವರ ಸಾಧನೆಗಳನ್ನು ರೈತರಿಗೆ ಅರಿವು ಮೂಡಿಸಲಾಯಿತು. ಸಹಕಾರ ಕ್ಷೇತ್ರದ ಪಿತಾಮಹ ಸಿದ್ದನಗೌಡ ಪಾಟೀಲ್ ಇವರ ಆದರ್ಶಗಳನ್ನು ಆಡಳಿತ ಮಂಡಳಿಯವರು ಪಾಲನೆ ಮಾಡಬೇಕು ಎಂದು ಪ್ರಮಾಣಿಕರಿಸಿದರು. ನಂತರ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಉಪಾಧ್ಯಕ್ಷ ನಂಜುಂಡೇಗೌಡ, ನಿರ್ದೇಶಕ ಎಚ್.ಎಸ್.ವೆಂಕಟೇಶ್, ಸಿ.ಎ.ಗಣೇಶ್, ಪ್ರಸನ್ನಕುಮಾರ್, ಸಚಿನ್, ಸಿ.ಎಸ್.ಶಿವರಾಜ್, ಸೋಮಯ್ಯ, ನಿಂಗರಾಜನಾಯಕ, ಕಾರ್ಯದರ್ಶಿ ಕೃಷ್ಣೇಗೌಡ, ನಾಗರಾಜ್, ಕುಮಾರ್ ಇತರರು ಇದ್ದರು.